ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌: ವೀಡಿಯೊ ನೀಡಿದ್ದು ನಾನೇ ಎಂದಿದ್ದ ಮಾಜಿ ಕಾರು ಚಾಲಕ ಕಾರ್ತಿಕ್ ನಾಪತ್ತೆ…!?

ಹಾಸನ : ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಆಗುತ್ತಿದೆ. ಪ್ರಜ್ವಲ್​​ ರೇವಣ್ಣ ಅವರ ಅಶ್ಲೀಲ ವಿಡಿಯೋ ನೀಡಿದ್ದು ನಾನೇ ಎಂದು ಹೇಳಿದ್ದ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್​ ಇದೀಗ ನಾಪತ್ತೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾಸನದ ಪೆನ್‌ಡ್ರೈವ್‌ ಪ್ರಕರಣ ದೇಶದಾದ್ಯಂತ ಸುದ್ದಿಯಾಗುತ್ತಿದ್ದಂತೆ ಎರಡು ದಿನಗಳ ಹಿಂದೆ ಅಜ್ಞಾತ ಸ್ಥಳದಿಂದ ವೀಡಿಯೊ ಮಾಡಿ ಹಂಚಿಕೊಂಡಿದ್ದ ಕಾರ್ತಿಕ್​, ನಾನು ಪ್ರಕರಣ ಸಂಬಂಧ ಎಸ್‌ಐಟಿ ತನಿಖೆಗೆ ಹಾಜರಾಗುತ್ತೇನೆ, ಹೇಳಿಕೆ ನೀಡುತ್ತೇನೆ ಎಂದು ಹೇಳಿದ್ದರು ಆದರೆ ಇದೀಗ ದಿಢೀರ್‌ ಕಾರ್ತಿಕ್​ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹೊಳೆನರಸೀಪುರ ತಾಲೂಕಿನ ಕಡುವಿನಕೋಟೆಯ ಕಾರ್ತಿಕ್, ಪ್ರಜ್ವಲ್ ರೇವಣ್ಣ ಬಳಿ ಅನೇಕ ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡಿದ್ದರು.​ ಬಳಿಕ ಮನಸ್ತಾಪದಿಂದ ಕೆಲಸ ತೊರೆದಿದ್ದರು ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಅಜ್ಞಾತ ಸ್ಥಳದಿಂದ ತನ್ನ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದ ಕಾರ್ತಿಕ್​, ನಾನು ಹದಿನೈದು ವರ್ಷದಿಂದ ಪ್ರಜ್ವಲ್‌ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೇನೆ. ಒಂದು ವರ್ಷದಿಂದ ಕೆಲಸ ಬಿಟ್ಟಿದ್ದೇನೆ. ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದರು. ಹಿಂಸೆ ಕೊಟ್ಟರು ಹಲ್ಲೆ ಮಾಡಿದರು. ಆದ್ದರಿಂದ ಅವರ ಮನೆಯಿಂದ ಹೊರಬಂದೆ ಎಂದು ಹೇಳಿದ್ದರು.
ದೇವರಾಜೇಗೌಡ ಇವರ ಕುಟುಂಬದ ವಿರುದ್ಧ ಹೋರಾಟ ಮಾಡುತ್ತಿದ್ದರು. ಯಾರಿಂದಲೂ ನ್ಯಾಯ ಸಿಗಲ್ಲ ಎಂದು ದೇವರಾಜೇಗೌಡ ಬಳಿ ಹೋದೆ. ಯಾವುದೇ ಅಶ್ಲೀಲ ವೀಡಿಯೊ ರಿಲೀಸ್ ಮಾಡಬಾರದು ಎಂದು ನನ್ನ ವಿರುದ್ಧ ಪ್ರಜ್ವಲ್ ರೇವಣ್ಣ ಸ್ಟೇ ತರುತ್ತಾರೆ. ನಿನ್ನ ಬಳಿ ಇರುವ ವಿಡಿಯೋ, ಫೋಟೋಸ್, ನಾನು ಯಾರಿಗೂ ತೋರಿಸಲ್ಲ ಕೊಡು ಎಂದು ದೇವರಾಜೇಗೌಡ ಕೇಳಿದ್ದರು. ನಾನು ನಂಬಿ ನನ್ನ ಬಳಿಯಿದ್ದ ವಿಡಿಯೋದ ಒಂದು ಕಾಪಿ ಕೊಟ್ಟೆ. ಅವರು ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದರು.
ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ಕೊಟ್ಟಿಲ್ಲ. ಕಾಂಗ್ರೆಸ್‌ನವರಿಗಂತೂ ನಾನು ವೀಡಿಯೊ ಕೊಟ್ಟಿಲ್ಲ. ಕಾಂಗ್ರೆಸ್ ಅವರ ಮೇಲೆ ನಂಬಿಕೆ. ಇಲ್ಲದೇ ದೇವರಾಜೇಗೌಡರ ಹತ್ತಿರ ಕೊಟ್ಟಿದ್ದೆ. ಪೆನ್‌ಡ್ರೈವ್ ಯಾರೂ ಹಂಚಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಎಸ್‌ಐಟಿ ಮುಂದೆ ಹಾಜರಾಗಿ ಎಲ್ಲಾ ಹೇಳಿ ಕೊಳ್ಳುತ್ತೇನೆ. ನಂತರ ಮಾಧ್ಯಮದ ಮುಂದೆ ಎಲ್ಲಾ ವಿವರವಾಗಿ ಹೇಳುತ್ತೇನೆ ಎಂದು ವೀಡಿಯೊದಲ್ಲಿ ಕಾರ್ತಿಕ್‌ ಹೇಳಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್​ಗೆ ಎಸ್‌ಐಟಿ (SIT) ನೋಟಿಸ್ ಸಹ ನೀಡಿತ್ತು. ಆದರೆ ಇದೀಗ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಆರೋಪ
ಕಾರ್ತಿಕ್ ನಾಪತ್ತೆ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಬುಧವಾರ ಆರೋಪಿಸಿದ್ದಾರೆ. ಕಾರ್ತಿಕ್ ಮಲೇಷಿಯಾಗೆ ಹೋಗಿದ್ದಾನೆ ಎಂದು ಅವರು ಹೇಳಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಕುಮಾರಸ್ವಾಮಿ, ಕಾರ್ತಿಕನನ್ನು ಮಲೇಷಿಯಾಕ್ಕೆ ಕಳುಹಿಸಿದವರ್ಯಾರು ಎಂದು ಪ್ರಶ್ನಿಸಿದ್ದರು.

ಪ್ರಮುಖ ಸುದ್ದಿ :-   ಬೆಳಗಾವಿ: ಹಾಡಹಗಲೇ ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನ ಕೊಲೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement