ಬೆಂಗಳೂರು: ಬರೋಬ್ಬರಿ ಐದು ತಿಂಗಳ ಬಳಿಕ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು, ನಗರದ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ವರುಣ ತಂಪೆರೆದಿದ್ದು, ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಸುಮಾರು 40 ಡಿಗ್ರಿಗೆ ಏರಿದ್ದ ತಾಪಮಾನ ಮಳೆಯಾದ ಬಳಿಕ 24 ಡಿಗ್ರಿಗೆ ಕುಸಿದಿದೆ ಎಂದು ಹೇಳಲಾಗಿದೆ.
ಬೆಂಗಳೂರು ನಗರದ ಹಲವೆಡೆ ಗುರುವಾರ ಜೋರಾಗಿ ಮಳೆಯಾಗಿತ್ತು. ಇಂದು ಶುಕ್ರವಾರ ಕೂಡ ಮಧ್ಯಾಹ್ನದ ನಂತರ ನಗರದ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿದೆ. ಇಂದು, ಶುಕ್ರವಾರ ಮಧ್ಯಾಹ್ನ, ಮೋಡಗಳು ರಚನೆಯಾದವು, ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ನಗರದ ಅನೇಕ ಕಡೆ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ.
ಬೆಂಗಳೂರಿನ ವಿಧಾನಸೌಧ, ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಸಂಪಂಗಿರಾಮನಗರ, ಮಲ್ಲೇಶ್ವರಂ, ಜಯನಗರ, ಶಿವಾಜಿ ನಗರ, ಕೊತ್ತನೂರು, ಪ್ಯಾಲೇಸ್ ಗುಟ್ಟಹಳ್ಳಿ, ಹೊರಮಾವು, ಕೆಆರ್ ಪುರಂ, ನಾಗವರ, ಮಹಾಲಕ್ಷ್ಮಿ ಬಡಾವಣೆ, ಮೆಜೆಸ್ಟಿಕ್, ರೇಸ್ ಕೋರ್ಸ್, ಶಿವಾನಂದ ಸರ್ಕಲ್, ಚಾಲುಕ್ಯ ಸರ್ಕಲ್ , ಮೈಸೂರು ಬ್ಯಾಂಕ್ ವೃತ್ತ, ಮಾರ್ಕೆಟ್, ಕೆಆರ್ ಪುರಂ, ವೈಟ್ ಫಿಲ್ಡ್, ರಿಚ್ ಮಂಡ್ ಟೌನ್, ರಾಮಮೂರ್ತಿನಗರ, ಸದಾಶಿವನಗರ ಸೇರಿದಂತೆ ಹಲವಡೆ ಮಳೆಯಾಗಿದೆ.
ಮೇ ತಿಂಗಳ ಮೊದಲ ವಾರದಲ್ಲೇ ಮಳೆ ಆಗಮಿಸಿದೆ. ಮುಂದಿನ ಕನಿಷ್ಠ 2 ದಿನಗಳ ಕಾಲ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ