ಎನ್‌ಕೌಂಟರ್‌ನಲ್ಲಿ 12 ಮಾವೋವಾದಿಗಳನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ರಾಯ್ಪುರ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ 12 ಮಾವೋವಾದಿಗಳು ಹತರಾಗಿದ್ದಾರೆ ಎಂದು ಮುಖ್ಯಮಂತ್ರಿ ವಿಷ್ಣು ದೇವ ಸಾಯಿ ಹೇಳಿದ್ದಾರೆ.
ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿಡಿಯಾ ಗ್ರಾಮದ ಬಳಿಯ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ಈ ಹಿಂದೆ ತಿಳಿಸಿದ್ದರು.
“ಗಂಗಲೂರು ಪ್ರದೇಶದಲ್ಲಿ ಗುಂಡಿನ ಚಕಮಕಿ ಕೊನೆಗೊಂಡಿದೆ. ಇದುವರೆಗೆ 12 ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಮ್ಮ ಭದ್ರತಾ ಪಡೆಗಳು ಪ್ರಮುಖ ಯಶಸ್ಸನ್ನು ಸಾಧಿಸಿವೆ” ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದರು. ಕಾರ್ಯಾಚರಣೆಗಾಗಿ ಭದ್ರತಾ ಪಡೆಗಳು ಮತ್ತು ಹಿರಿಯ ಅಧಿಕಾರಿಗಳನ್ನು ಅವರು ಅಭಿನಂದಿಸಿದರು.

ಕಳೆದ ಒಂದು ತಿಂಗಳಲ್ಲಿ ಛತ್ತೀಸ್‌ಗಢದಲ್ಲಿ ಮಾವೋವಾದಿಗಳಿಗೆ ಇದು ಮೂರನೇ ದೊಡ್ಡ ಹೊಡೆತವಾಗಿದೆ. ಏಪ್ರಿಲ್ 16 ರಂದು, ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 29 ಮಾವೋವಾದಿಗಳು ಹತರಾಗಿದ್ದರು, ಏಪ್ರಿಲ್ 30 ರಂದು ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ 10 ಮಾವೋವಾದಿಗಳು ಹತರಾಗಿದ್ದರು.
ರಾಜ್ಯದ ಬಸ್ತಾರ್ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಈ ವರ್ಷ ಇದುವರೆಗೆ 103 ಮಾವೋವಾದಿಗಳು ಹತರಾಗಿದ್ದಾರೆ.

ಪ್ರಮುಖ ಸುದ್ದಿ :-   ಪಿಕಪ್ ವಾಹನ ಪಲ್ಟಿಯಾಗಿ 18 ಮಂದಿ ಸಾವು, ನಾಲ್ವರಿಗೆ ಗಾಯ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement