ಹಾಸನ: ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ವಿರುದ್ಧ ದಾಖಲಾಗಿರುವ ಮಹಿಳೆ ಕಿಡ್ನಾಪ್ ಪ್ರಕರಣಕ್ಕೆ (Kidnap Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಪಹರಣಗೊಂಡ ಸಂತ್ರಸ್ತೆಯದ್ದು ಎನ್ನಲಾದ ವೀಡಿಯೊ ಈಗ ಹೊರಬಿದ್ದಿದೆ.
ಸಂತ್ರಸ್ತೆಯದ್ದು ಎನ್ನಲಾದ ವೀಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಮಹಿಳೆ “ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ” ಎಂದು ಹೇಳಿದ್ದಾಳೆ. ಆದರೆ ಈ ವೀಡಿಯೊ ಯಾವಾಗ ಮಾಡಿದ್ದು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ರೇವಣ್ಣ ಜಾಮೀನು ಅರ್ಜಿ (Revanna Bail) ವಿಚಾರಣೆ ಇಂದು ಸೋಮವಾರ ನಡೆಯಲಿದೆ. ಈ ಹೊತ್ತಲ್ಲೇ ಸಂತ್ರಸ್ತೆಯದ್ದು ಎನ್ನಲಾದ ಈ ವೀಡಿಯೊ ವೈರಲ್ ಆಗಿದೆ.
ವೈರಲ್ ಆದ ವೀಡಿಯೊದಲ್ಲಿ ಸಂತ್ರಸ್ತೆ ಎಂದು ಹೇಳಿಕೊಂಡವರು ಮಾತನಾಡಿದ್ದು, ಕೆಲವರು ಏನೇನೋ ಮಾತನಾಡಿದ್ದನ್ನು ಕೇಳಿ ಬೇಸರವಾಗಿತ್ತು. ಮನನೊಂದು ನೆಂಟರ ಮನೆಗೆ ತೆರಳಿದ್ದೆ. ನೆಂಟರ ಮನೆಯಲ್ಲೇ ಇದ್ದುಕೊಂಡು ಹೇಳಿಕೆ ಬಿಡುಗಡೆ ಮಾಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ನನ್ನನ್ನು ಯಾರು ಕಿಡ್ನ್ಯಾಪ್ ಮಾಡಿಲ್ಲ, ನಾನೇ ಮನನೊಂದು ಸಂಬಂಧಿಕರ ಮನೆಗೆ ಬಂದಿದ್ದೇನೆ. ನನಗೆ ಭವಾನಿಯಕ್ಕ, ರೇವಣ್ಣ, ಪ್ರಜ್ವಲ್ ಏನೂ ತೊಂದರೆ ಕೊಟ್ಟಿಲ್ಲ. ಇನ್ನೆರಡು ದಿನದಲ್ಲಿ ಮನೆಗೆ ಹಿಂತಿರುಗುತ್ತೇನೆ ಎಂದು ಮಹಿಳೆ ಹೇಳಿದ್ದಾರೆ.
ಟಿವಿಯಲ್ಲಿ ವಿಚಾರ ನೋಡಿ ಬೇಸರವಾಯ್ತು. ನನಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ಮೊಬೈಲ್ ವೀಡಿಯೊಕ್ಕೂ ನನಗೂ ಸಂಬಂಧವಿಲ್ಲ. ಮನೆ ಹತ್ತಿರ ಪೊಲೀಸರನ್ನು ಕಳುಹಿಸಿ ಟಾರ್ಚರ್ ಕೊಡ್ಬೇಡಿ, ನಾವು ಕೂಲಿ ಮಾಡಿಕೊಂಡು ತಿನ್ನುವವರು. ನಮಗೆ ತೊಂದರೆ ಕೊಡಬೇಡಿ. ಏನಾದ್ರೂ ತೊಂದರೆಯಾದರೇ ನಾವೇ ನಿಮಗೆ ಹೇಳುತ್ತೇವೆ. ನನ್ನ ಮಗ ಗೊತ್ತಿಲ್ಲದೆ ಗಾಬರಿಪಟ್ಟು ಹೀಗೆ ಮಾಡಿದ್ದಾನೆ, ಯಾರೂ ನನಗೆ ತೊಂದರೆ ಕೊಟ್ಟಿಲ್ಲ ಎಂದು ಮಹಿಳೆ ಮನವಿ ಮಾಡಿದ್ದಾರೆ.
ಈ ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಬಂಧಿತರಾಗಿ ಜೈಲು ಸೇರಿದ್ದಾರೆ. ಎಚ್.ಡಿ. ರೇವಣ್ಣ ಮೇಲಿನ ಅಪಹರಣ ಪ್ರಕರಣದಲ್ಲಿ ಸಂತ್ರಸ್ತೆ ವಿಚಾರಣೆ ಆಗಿದೆ. ಆದರೆ ಈಗ ನಾನು ಕಿಡ್ನ್ಯಾಪ್ ಆಗಿಲ್ಲ ಎಂದು ಹೇಳಿರುವ ವೀಡಿಯೊ ವೈರಲ್ ಆಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ