ನವದೆಹಲಿ: ಪತಂಜಲಿ ಆಯುರ್ವೇದ ಕಂಪನಿ ಮತ್ತು ಮಾಲೀಕರಾದ ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಅವರು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡಿದ್ದ ಸಂಬಂಧ ದಾಖಲಿಸಲಾದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪನ್ನು ಕಾಯ್ದಿರಿಸಿದೆ.
ಪತಂಜಲಿ ಉತ್ಪನ್ನಗಳ ಕುರಿತು ಪ್ರಕಟಿಸಲಾಗಿದ್ದ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತೆಗೆದುಹಾಕಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸಲಾಗುವುದು ಎಂದು ಪತಂಜಲಿ ತಿಳಿಸಿದ ಮೇಲೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಬಾಬಾ ರಾಮದೇವ ಮತ್ತು ಬಾಲಕೃಷ್ಣ ಅವರ ವೈಯಕ್ತಿಕ ಹಾಜರಾತಿ ಆದೇಶ ಕೈಬಿಟ್ಟಿತು.
ಮೂರು ವಾರಗಳಲ್ಲಿ ಸಲ್ಲಿಸಬೇಕಾದ ಅಫಿಡವಿಟ್‌ನಲ್ಲಿ ಪರವಾನಗಿ ಅಮಾನತುಗೊಳಿಸಿರುವ ಪತಂಜಲಿ ಉತ್ಪನ್ನಗಳನ್ನು ಹಿಂಪಡೆಯಲು ತೆಗೆದುಕೊಂಡ ಕ್ರಮಗಳನ್ನೂ ಕಂಪನಿ ವಿವರಿಸಬೇಕಿದೆ.
ಕೋವಿಡ್ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಪತಂಜಲಿ ಮತ್ತು ಅದರ ಸಂಸ್ಥಾಪಕರಾದ ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಅವರು ಅವಹೇಳನಕಾರಿ ಅಭಿಯಾನ ನಡೆಸುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಬಲ್ಬೀರ್ ಸಿಂಗ್ ಅವರು, ಪತಂಜಲಿ ತನ್ನ ಜಾಹೀರಾತುಗಳನ್ನು ಪ್ರದರ್ಶಿಸುತ್ತಿರುವ ಎಲ್ಲಾ ವೇದಿಕೆಗಳಿಗೆ ಪತ್ರ ಬರೆದು ನಿಷೇಧಿತ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿದೆ. ತಮ್ಮ ಕಕ್ಷಿದಾರರು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವುದರಿಂದ ವಿನಾಯತಿ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು.
ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಬಾಬಾ ರಾಮದೇವ ಅವರು ಪ್ರಭಾವಿಯಾಗಿದ್ದ ಅವರು ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿತು.
ಆಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಬಾಬಾ ರಾಮದೇವ ಅವರು ಯೋಗ ಕುರಿತು ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ ಎಂದರು. ಇದಕ್ಕೆ ನ್ಯಾಯಾಲಯ ಯೋಗಕ್ಕಾಗಿ ಅವರು ಉತ್ತಮ ಕೆಲಸ ಮಾಡಿರಬಹುದು. ಆದರೆ ಪತಂಜಲಿ ಉತ್ಪನ್ನ ಬೇರೆ ವಿಚಾರ ಎಂದು ಹೇಳಿತು.
ನಿಮ್ಮ ಕಾಮೆಂಟ್ ಬರೆಯಿರಿ