ಮೂರನೇ ಹಂತದ ಮತದಾನದ ವೇಳೆ ಉತ್ತರಪ್ರದೇಶದ ಇಟಾಹ್ನಲ್ಲಿ ಯುವಕನೊಬ್ಬ ಒಂದೇ ಬೂತ್ ನಲ್ಲಿ 8 ಬಾರಿ ಮತದಾನ ಮಾಡಿದ್ದಾನೆ. ತಾನು ಪ್ರತಿ ಬಾರಿ ಮತದಾನ ಮಾಡಿದ್ದನ್ನೂ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೀಡಿಯೊ ವೈರಲ್ ಆದ ನಂತರ ಆತನನ್ನು ಬಂಧಿಸಲಾಗಿದೆ.
ಅಲ್ಲದೆ, ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಮತಗಟ್ಟೆಯ ಎಲ್ಲ ಸಿಬ್ಬಂದಿಯನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬಂಧಿತ ಯುವಕನನ್ನು ಇಟಾಹ್ ಜಿಲ್ಲೆಯ ಖಿರಿಯಾ ಪಮರನ್ ಗ್ರಾಮದ ನಿವಾಸಿ ರಾಜನ್ ಸಿಂಗ್ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಘಟನೆಯು ಫರೂಕಾಬಾದ್ ಸಂಸದೀಯ ಕ್ಷೇತ್ರದಲ್ಲಿ ವರದಿಯಾಗಿದೆ ಮತ್ತು ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆದ ನಂತರ ಕ್ರಮ ಕೈಗೊಳ್ಳಲಾಗಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರು ಈ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದ್ದಾರೆ. 2:20 ನಿಮಿಷಗಳ ವಿಡಿಯೋವನ್ನು ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಯಾದವ್ ಪೋಸ್ಟ್ ಮಾಡಿದ್ದಾರೆ. ಆಗುತ್ತಿರುವುದು ತಪ್ಪು ಎಂದು ಭಾವಿಸಿದರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಯಾದವ್ ಹೇಳಿದ್ದಾರೆ.
ಆರೋಪಿಯು ಬಿಜೆಪಿ ಅಭ್ಯರ್ಥಿ ಮುಖೇಶ ರಜಪೂತ್ ಅವರಿಗೆ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ (ಇವಿಎಂ) ಕನಿಷ್ಠ 8 ಬಾರಿ ಮತ ಚಲಾಯಿಸುವುದನ್ನು ವೈರಲ್ ಆದ ಈ ವೀಡಿಯೊದಲ್ಲಿ ಕಾಣಬಹುದು.
ಯಾದವ್ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್ ರಿನ್ವಾ, ಘಟನೆಯ ಎಫ್ಐಆರ್ ಅನ್ನು ಭಾರತೀಯ ದಂಡ ಸಂಹಿತೆ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆ, 1951 ರ ಹಲವಾರು ಸೆಕ್ಷನ್ಗಳ ಅಡಿಯಲ್ಲಿ ಎಟಾ ಜಿಲ್ಲೆಯ ನಯಾಗಾಂವ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. “ವೀಡಿಯೊದಲ್ಲಿ ಅನೇಕ ಬಾರಿ ಮತ ಚಲಾಯಿಸುತ್ತಿರುವಂತೆ ಕಂಡುಬರುವ ವ್ಯಕ್ತಿಯನ್ನು ಅನಿಲ್ ಸಿಂಗ್ ಅವರ ಮಗ ಮತ್ತು ಖಿರಿಯಾ ಪಮರನ್ ಗ್ರಾಮದ ನಿವಾಸಿ ರಾಜನ್ ಸಿಂಗ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲಾಗಿದೆ’ ಎಂದು ಸಿಇಒ ತಿಳಿಸಿದ್ದಾರೆ. ಚುನಾವಣಾ ತಂಡದಲ್ಲಿದ್ದ ಎಲ್ಲಾ ಸದಸ್ಯರನ್ನು ಅಮಾನತುಗೊಳಿಸಲಾಗಿದೆ.
ಸಂಬಂಧಿಸಿದ ಮತಗಟ್ಟೆಯಲ್ಲಿ ಮರುಮತದಾನವನ್ನು ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ. ಮತದಾರರ ಗುರುತಿನ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಅನುಸರಿಸಲು ಕಟ್ಟುನಿಟ್ಟಾದ ಸೂಚನೆಗಳನ್ನು ಉತ್ತರ ಪ್ರದೇಶದ ಉಳಿದ ಹಂತಗಳ ಎಲ್ಲ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ