
ಮುಂಬೈ : ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಪ್ರಮುಖ ಹಾಗೂ ಮಾಲೆಗಾಂವ್‌ನ ಮಾಜಿ ಮೇಯರ್ ಅಬ್ದುಲ್ ಮಲಿಕ್ ಮೊಹಮ್ಮದ್ ಯೂನಸ್ ಇಸಾ ಮೇಲೆ ದುಷ್ಕರ್ಮಿಗಳು ಸೋಮವಾರ ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ನಾಸಿಕ ಜಿಲ್ಲೆಯ ಮಾಲೆಗಾಂವ್‌ನಲ್ಲಿ ನಡೆದಿದೆ.
ಮಲಿಕ್ ಅವರ ಎದೆಯ ಎಡಭಾಗದಲ್ಲಿ ಒಂದು ಗುಂಡು ಸೇರಿದಂತೆ ಮೂರು ಗುಂಡುಗಳು ತಗುಲಿವೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಓಲ್ಡ್ ಆಗ್ರಾ ರಸ್ತೆಯಲ್ಲಿರುವ ಅಂಗಡಿಯೊಂದರ ಹೊರಗೆ ಮಲಿಕ್ ಕುಳಿತಿದ್ದಾಗ ಮಧ್ಯರಾತ್ರಿ 1:20 ಕ್ಕೆ ದಾಳಿ ನಡೆದಿದೆ. ಘಟನೆಯ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಬ್ದುಲ್ ಮಲಿಕ್ ಮೇಲೆ ಮೂರು ಬಾರಿ ಗುಂಡು ಹಾರಿಸಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ.
ಮೋಟಾರು ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಎಐಎಂಐಎಂ ನಾಯಕನ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಅವರ ಎದೆ ಮತ್ತು ಕಾಲಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಸಂಬಂಧಿತ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ಗಳ ಅಡಿಯಲ್ಲಿ 307 (ಕೊಲೆ ಯತ್ನ) ಸೇರಿದಂತೆ ಪ್ರಕರಣ ದಾಖಲಿಸಿದ್ದಾರೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅದಾಳಿಯನ್ನು ಖಂಡಿಸಿದ್ದು, “ಎಐಎಂಐಎಂ ಮಾಲೆಗಾಂವ್ ಅಧ್ಯಕ್ಷ ಮತ್ತು ಮಾಜಿ ಮೇಯರ್ ಅಬ್ದುಲ್ ಮಲಿಕ್ ಅವರಿಗೆ ನಿನ್ನೆ ರಾತ್ರಿ ಮೂರು ಬಾರಿ ಗುಂಡು ಹಾರಿಸಲಾಗಿದೆ. ಅವರನ್ನು ಚಿಕಿತ್ಸೆಗಾಗಿ ನಾಸಿಕ್‌ಗೆ ಕರೆದೊಯ್ಯಲಾಗಿದೆ. ನಾನು ಅವರ ಸಹೋದರ ಡಾ. ಖಾಲಿದ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ನಾವು ಅಬ್ದುಲ್ ಅವರೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಮಹಾರಾಷ್ಟ್ರ ಡಿಜಿಪಿ ತಕ್ಷಣ ಕ್ರಮಕೈಗೊಳ್ಳಬೇಕು ಮತ್ತು ಕೊಲೆಗಾರರನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಎಐಎಂಐಎಂ ಮಹಾರಾಷ್ಟ್ರ ಅಧ್ಯಕ್ಷ ಇಮ್ತಿಯಾಜ್ ಜಲೀಲ್ ಕೂಡ ದಾಳಿಯನ್ನು ಖಂಡಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ