ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ : ವಿದೇಶದಿಂದಲೇ ವೀಡಿಯೊ ಸಂದೇಶ; ಮೇ 31ರಂದು ವಿಚಾಣೆಗೆ ಹಾಜರಾಗ್ತಾರಂತೆ…

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್‌ ರೇವಣ್ಣ (Prajwal Revanna) ಅವರಿಗೆ ತಕ್ಷಣವೇ ಕರ್ನಾಟಕಕ್ಕೆ ವಾಪಸ್‌ ಆಗಬೇಕು ಹಾಗೂ ಈ ನೆಲದ ಕಾನೂನು ಗೌರವಿಸಬೇಕು ಎಂದು ಅಜ್ಜ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (H D Deve Gowda) ಅವರು ಬಹಿರಂಗ ಪತ್ರ ಬರೆದ ಬೆನ್ನಲ್ಲೇ ಪ್ರಜ್ವಲ್‌ ರೇವಣ್ಣ ಅವರು ಭಾರತಕ್ಕೆ ಬರುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ವಿದೇಶದಲ್ಲಿದ್ದುಕೊಂಡೇ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ, “ನಾನು ಏಪ್ರಿಲ್‌ 26 ರಂದು ವಿದೇಶಕ್ಕೆ ತೆರಳುವುದು ಪೂರ್ವನಿಗದಿಯಾಗಿತ್ತು” ಎಂದು ಹೇಳಿದ್ದಾರೆ. ಹಾಗೂ ಮೇ 31ರಂದು ಭಾರತಕ್ಕೆ ಬಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

“ನಾನು ಎಲ್ಲಿಯೂ ಓಡಿ ಹೋಗಿಲ್ಲ. ನಾನು ವಿದೇಶದಲ್ಲಿ ಎಲ್ಲಿದ್ದೇನೆ ಎಂದು ಮಾಹಿತಿ ಕೊಡದಿರುವುದಕ್ಕೆ ರಾಜ್ಯದ ಜನತೆ, ಜೆಡಿಎಸ್ ಕಾರ್ಯಕರ್ತರು, ತಮ್ಮ ತಂದೆ, ತಾಯಿ, ತಾತ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕುಟುಂಬದವರ ಬಳಿ ಕ್ಷಮೆ ಕೇಳುತ್ತೇನೆ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ನನ್ನ ವಿರುದ್ಧ ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ನಾನು ನನ್ನ ತಾತ, ಜೆಡಿಎಸ್‌ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ಆದರೂ, ನಾನು ಭಾರತಕ್ಕೆ ಬಂದು ವಿಚಾರಣೆ ಎದುರಿಸುತ್ತೇನೆ” ಎಂದು ಪ್ರಜ್ವಲ್‌ ರೇವಣ್ಣ ವೀಡಿಯೊದಲ್ಲಿ ತಿಳಿಸಿದ್ದಾರೆ.

ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ. ನನ್ನ ವಿರುದ್ಧ ಮಾಡಿದ ಆರೋಪಗಳನ್ನು ಕೇಳಿ ನನಗೆ ಶಾಕ್‌ ಆಯಿತು. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಐಸೋಲೇಷನ್‌ನಲ್ಲಿ ಇದ್ದೆ. ನನ್ನ ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ದಾಖಲಾದ ಬಗ್ಗೆ ತಿಳಿಯಿತು. ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಸಿದರು. ಆದರೂ, ನಾನು ರಾಜ್ಯಕ್ಕೆ ಆಗಮಿಸಿ ತನಿಖೆಗೆ ಸಹಕಾರ ನೀಡುತ್ತೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನ್ಯಾಯಾಂಗದ ಮೂಲಕ ನನ್ನ ವಿರುದ್ಧದ ಸುಳ್ಳು ಆರೋಪಗಳಿಂದ ಮುಕ್ತನಾಗುತ್ತೇನೆ. ಮೇ 31 ರಂದು ಎಸ್ ಐಟಿ ಎದುರು ಹಾಜರಾಗುತ್ತೇನೆ, ನನ್ನನ್ನು ನಂಬಿ. ನನ್ನ ಮೇಲೆ ದೇವರು, ಜನತೆ, ಕುಟುಂಬದವರ ಆಶೀರ್ವಾದವಿರಲಿ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ನಾನು ಈ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸ ನನಗಿದೆ” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ದಿನ ಜೋರಾದ ಗಾಳಿ ಮಳೆಯ ಮುನ್ಸೂಚನೆ

ಇತ್ತೀಚೆಗೆ ಪ್ರಜ್ವಲ್‌ ರೇವಣ್ಣ ಅವರಿಗೆ ಬಹಿರಂಗ ಪತ್ರ ಬರೆದಿದ್ದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ವಾಪಸ್‌ ಆಗಿ ತನಿಖೆ ಎದುರಿಸುವಂತೆ ಸೂಚಿಸಿದ್ದರು. ಎಚ್ಚರಿಕೆಯನ್ನೂ ನೀಡಿದ್ದರು. ಪ್ರಜ್ವಲ್ ರೇವಣ್ಣ ಏ.27 ರಂದು ಜರ್ಮನಿಗೆ ತೆರಳಿದ್ದರು. ಎಸ್‌ಐಟಿ ಮನವಿಯ ಮೇರೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮೂಲಕ ಇಂಟರ್‌ಪೋಲ್ ಈಗಾಗಲೇ ಆತನ ಇರುವಿಕೆಯ ಕುರಿತು ಮಾಹಿತಿ ಕೋರಿ ‘ಬ್ಲೂ ಕಾರ್ನರ್ ನೋಟಿಸ್’ ಜಾರಿ ಮಾಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೇ 18 ರಂದು ಪ್ರಜ್ವಲ್ ರೇವಣ್ಣ ವಿರುದ್ಧ ಬಂಧನ ವಾರಂಟ್ ಹೊರಡಿಸಿತು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement