ವೀಡಿಯೊ..| ಮಧ್ಯರಸ್ತೆಯಲ್ಲೇ ವ್ಯಕ್ತಿಯೊಬ್ಬನಿಗೆ ಪಿಸ್ತೂಲ್ ತೊರಿಸಿ ಹಲ್ಲೆ ಮಾಡಿದ ಅಂತಾರಾಷ್ಟ್ರೀಯ ಮಟ್ಟದ ಶೂಟರ್ ; ಬಂಧನ

ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ವ್ಯಕ್ತಿಯೊಬ್ಬ ಒಂದು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಮತ್ತೊಬ್ಬನಿಗೆ ಬೆದರಿಕೆ ಹಾಕಿರುವ ಘಟನೆ ರಸ್ತೆಯಲ್ಲಿ ನಡೆದಿದೆ. ಲಕ್ನೋದ ವೆಬ್ ಮಾಲ್ ಪ್ರದೇಶದ ರಸ್ತೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ನಂತರ ಉಂಟಾದ ವಿವಾದದಿಂದ ರಸ್ತೆಯಲ್ಲಿ ಗಲಾಟೆಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದ ಪಿಸ್ತೂಲ್ ಶೂಟರ್ ವಿನೋದ ಮಿಶ್ರಾ ಎಂಬವರು ಮತ್ತೊಂದು ವಾಹನದ ಚಾಲಕ ರಂಜೀತ್ ಎಂಬವರ ಟೀ ಶರ್ಟ್ ಅನ್ನು ಹಿಡಿದುಕೊಂಡು ಪಿಸ್ತೂಲ್ ಅನ್ನು ತೋರಿಸಿ ಮತ್ತು ವ್ಯಕ್ತಿಯ ಹೊಟ್ಟೆಗೆ ಬಂದೂಕಿನ ಬ್ಯಾರೆಲಿನಿಂದ ಹೊಡೆಯವುದು ವೀಡಿಯೊ ಕ್ಲಿಪ್‌ನಲ್ಲಿ ಕಂಡುಬಂದಿದೆ. ಆತ ತನ್ನ ಕೈಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದಾಗ ವಿನೋದ ಮಿಶ್ರಾ ಆತನನ್ನು ಕಾರಿನ ಕಡೆಗೆ ತಳ್ಳುವುದು ಮತ್ತು ಭುಜದ ಮೇಲೆ ಬಂದೂಕಿನ ಬುಡದಿಂದ ಹೊಡೆಯುವುದು ಸಹ ವೀಡಿಯೊದಲ್ಲಿ ಕಂಡುಬಂದಿದೆ.

“ರಂಜೀತ್ ತಮ್ಮ ಬಿಳಿ ವ್ಯಾಗನಾರ್‌ನಲ್ಲಿ ಹೋಗುತ್ತಿದ್ದಾಗ ಅವರ ಕಾರು ಮಿಶ್ರಾ ಅವರ ಕಪ್ಪು ಟಾಟಾ ಸಫಾರಿಗೆ ಡಿಕ್ಕಿ ಹೊಡೆದಿದೆ, ಇದು ಅವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು ಮತ್ತು ಆಗ ಆರೋಪಿ ತಮ್ಮ ಗನ್ ಅನ್ನು ತೆಗೆದುಕೊಂಡರು” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ ಕುಮಾವತ್ ಹೇಳಿದ್ದಾರೆ.
ಮಿಶ್ರಾ ಕನಿಷ್ಠ ಮೂರು ಬಾರಿ ಬಂದೂಕಿನಿಂದ ವ್ಯಕ್ತಿಯನ್ನು ಹೊಡೆದು ಹಲ್ಲೆ ನಡೆಸಿದ್ದಾರೆ. ರಂಜೀತ್‌ ತಮ್ಮ ಕಾರು ಗುದ್ದಿದ್ದಕ್ಕೆ ಕ್ಷಮೆಯಾಚಿಸಿದರೂ ಆರೋಪಿ ಬೆದರಿಕೆ ಹಾಕುತ್ತಲೇ ಇದ್ದ ಎಂದು ವರದಿಯಾಗಿದೆ.
ಈ ದೃಶ್ಯವನ್ನು ವಾಹನದಲ್ಲಿ ಹೋಗುತ್ತಿದ್ದವರು ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ಲಕ್ನೋದ ಫೈಜಾಬಾದ್ ರಸ್ತೆಯಲ್ಲಿರುವ ಬನ್ಸ್ಮಂಡಿಯಲ್ಲಿ ಈ ಘಟನೆ ನಡೆದಿದೆ. ರಂಜೀತ್ ನೀಡಿದ ದೂರಿನ ಮೇರೆಗೆ ಪೊಲೀಸರು ಘಟನೆಯನ್ನು ಗಮನಿಸಿ ಆರೋಪಿ ವಿನೋದ ಮಿಶ್ರಾನನ್ನು ಬಂಧಿಸಿದ್ದಾರೆ.
ಪೊಲೀಸರು ಪರವಾನಗಿ ಪಡೆದ ಪಿಸ್ತೂಲ್ ಸಹ ವಶಪಡಿಸಿಕೊಂಡಿದ್ದಾರೆ ಮತ್ತು ವಿಷಯವು ತನಿಖೆಯಲ್ಲಿದೆ. ಘಟನೆ ಸಂಬಂಧ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿ ಅಂತಾರಾಷ್ಟ್ರೀಯ ಮಟ್ಟದ ಶೂಟರ್ ಆಗಿದ್ದು, ಹಾಲಿ ಶೂಟಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement