ಮಂಗನಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಯಶಸ್ವಿ : ಪುನಃ ದೃಷ್ಟಿ ಪಡೆದ ಕೋತಿ…!

ಹಿಸಾರ್‌ : ಅಪರೂಪದ ಪ್ರಕರಣವೊಂದರಲ್ಲಿ ಹರಿಯಾಣದಲ್ಲಿ ಸರ್ಕಾರಿ ಆರೋಗ್ಯ ವಿಶ್ವವಿದ್ಯಾಲಯವು ಮಂಗಕ್ಕೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಹಿಸಾರ್ ಜಿಲ್ಲೆಯ ಲಾಲಾ ಲಜಪತ್ ರಾಯ್ ಪಶು ವೈದ್ಯಕೀಯ ಹಾಗೂ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯವು (LUVAS) ಹರ್ಯಾಣ ರಾಜ್ಯದಲ್ಲೇ ಮೊದಲ ಬಾರಿಗೆ ಮಂಗನಿಗೆ ಕ್ಯಾಟರಾಕ್ಟ್ ಸರ್ಜರಿ ನಡೆಸಿದೆ.
ವಿದ್ಯುತ್ ಆಘಾತದಿಂದ ಉಂಟಾದ ತೀವ್ರ ಸುಟ್ಟ ಗಾಯಗಳೊಂದಿಗೆ ಮಂಗವನ್ನು ಲಾಲಾ ಲಜಪತ್ ರಾಯ್ ಪಶು ವೈದ್ಯಕೀಯ ಹಾಗೂ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ(ಎಲ್‌ಯುವಿಎಎಸ್)ಕ್ಕೆ ಕರೆತರಲಾಗಿತ್ತು. ಹಂಸಿ ನಿವಾಸಿ, ಪ್ರಾಣಿ ಪ್ರಿಯ ಮುನೀಶ ಎಂಬವರು ಮಂಗ ಗಾಯಗೊಂಡಿದ್ದನ್ನು ಕಂಡು ಅದನ್ನು ವಿಶ್ವವಿದ್ಯಾನಿಲಯಕ್ಕೆ ಕರೆತಂದರು. ಆರಂಭದಲ್ಲಿ ಮಂಗವು ಮಾರಣಾಂತಿಕ ಸುಟ್ಟ ಗಾಯಗಳಿಂದಾಗಿ ನಡೆಯಲೂ ಸಾಧ್ಯವಾಗದೆ ಚಿಂತಾಜನಕ ಸ್ಥಿತಿಯಲ್ಲಿತ್ತು.

ಎಲ್‌ಯುವಿಎಎಸ್(LUVAS)ನಲ್ಲಿ ಪ್ರಾಣಿ ಶಸ್ತ್ರಚಿಕಿತ್ಸೆ ಮತ್ತು ವಿಕಿರಣಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್‌.ಎನ್‌ ಚೌಧರಿ ಮತ್ತು ಅವರ ತಂಡವು ಮಂಗನಿಗೆ ಚಿಕಿತ್ಸೆ ನೀಡಿತು. ಕಾಲಾನಂತರದಲ್ಲಿ, ಅದು ನಡೆಯುವ ಸಾಮರ್ಥ್ಯವನ್ನು ಮರಳಿ ಪಡೆಯಿತು. ಆದಾಗ್ಯೂ, ಮಂಗವು ದೃಷ್ಟಿ ಕಳೆದುಕೊಂಡಿದೆ ಎಂಬುದು ಅವರಿಗೆ ನಂತರ ಗೊತ್ತಾಯಿತು. ಎಲ್‌ಯುವಿಎಎಸ್(LUVAS)ನ ಪ್ರಾಣಿ ಕಣ್ಣಿನ ಘಟಕದ ಡಾ. ಪ್ರಿಯಾಂಕಾ ದುಗ್ಗಲ್ ಅವರು ಮಂಗಕ್ಕೆ ಎರಡು ಕಣ್ಣುಗಳಲ್ಲಿ ಬಿಳಿ ಕಣ್ಣಿನ ಪೊರೆ ಇದೆ ಎಂಬುದನ್ನು ಪತ್ತೆ ಮಾಡಿದರು. ಒಂದು ಕಣ್ಣಿನ ಗುಡ್ಡೆಯ ಭಾಗಕ್ಕೆ ಹಾನಿಯಾಗಿತ್ತು. ಹೀಗಾಗಿ ಇನ್ನೊಂದು ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಮಂಗನಿಗೆ ಕಣ್ಣಿನ ದೃಷ್ಟಿ ಮರಳಿ ಬಂದಿತು. ಹಾಗೂ ಮಂಗನಿಗೆ ಹೊಸ ಜೀವನಕ್ಕೆ ಅವಕಾಶ ಒದಗಿಸಿತು.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ: ಲಾಹೋರ್, ಇಸ್ಲಾಮಾಬಾದ್ ಮೇಲೆ ಭಾರತದ ವಾಯು ದಾಳಿ

5 / 5. 2

ಶೇರ್ ಮಾಡಿ :

2 Responses

  1. ಅನಾಮಧೇಯ

    ಆ ಮಂಗವನ್ನು ಆಸ್ಪತ್ರೆಗೆ ಕರೆತಂದ ಆ ಪ್ರಾಣಿಪ್ರಿಯನನ್ನು ಮತ್ತು ಸಕಾಲದಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮಾಡಿದ ವೈದರು ಹಾಗೂ ಅದಕ್ಕೆ ಸಹಾಯಿಸಿದ ಅಲ್ಲಿನ ಸಿಬ್ಬಂದಿ ವರ್ಗವನ್ನು ಆ ದೇವರು ಆಶೀರ್ವದಿಸಲಿ. ಅವರೆಲ್ಲರಿಗೂ ಒಳ್ಳೆಯದಾಗಲಿ.

  2. ಅನಾಮಧೇಯ

    ಒಳ್ಳೆಯ ಕೆಲಸ. ಅವರೆಲ್ಲರಿಗೂ ಒಳ್ಳೆಯದಾಗಲಿ.

ನಿಮ್ಮ ಕಾಮೆಂಟ್ ಬರೆಯಿರಿ

advertisement