ಮುಂಬೈ: ಎಕ್ಸಿಟ್ ಪೋಲ್‌ಗಳು ಊಹಿಸಿದಂತೆ ರಾಜಕೀಯ ಸ್ಥಿರತೆಯ ಭರವಸೆಯ ಮೇಲೆ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆಯು ಭಾರಿ ಜಿಗಿತವನ್ನು ಕಂಡಿದೆ.
30-ಷೇರುಗಳ ಸೆನ್ಸೆಕ್ಸ್ ಇಂದು, ಸೋಮವಾರ ಬೆಳಿಗ್ಗೆ 2,000 ಪಾಯಿಂಟ್‌ಗಳನ್ನು ಪಡೆಯಿತು. 50-ಸ್ಟಾಕ್ ನಿಫ್ಟಿ ಮಾರುಕಟ್ಟೆ ಬೆಳಿಗ್ಗೆ ಆರಂಭದ ಸಮಯದಲ್ಲಿ ನಾಲ್ಕು ವರ್ಷಗಳಲ್ಲೇ ಅದರ ಅತಿದೊಡ್ಡ ಜಿಗಿತವನ್ನು ದಾಖಲಿಸಿತು.
ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೋಮವಾರ ತಮ್ಮ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಎಲ್ಲಾ ಸೆನ್ಸೆಕ್ಸ್ ಮತ್ತು ನಿಫ್ಟಿ ಷೇರುಗಳು ಈಗ ಹಸಿರು ಬಣ್ಣದಲ್ಲಿವೆ.
ಪೂರ್ವ-ಮುಕ್ತಾಯದಲ್ಲಿ, ನಿಫ್ಟಿ 800 ಪಾಯಿಂಟ್‌ಗಳು ಅಥವಾ 3.58% ರಷ್ಟು ಏರಿಕೆಯಾಗಿ 23,227.90 ಕ್ಕೆ ತಲುಪಿದರೆ, ಸೆನ್ಸೆಕ್ಸ್ 2,621.98 ಪಾಯಿಂಟ್ ಅಥವಾ 3.55% ಜಿಗಿತ ಕಂಡು 76,583.29 ಕ್ಕೆ ತಲುಪಿದೆ.
ಅದಾನಿ ಪೋರ್ಟ್ಸ್, ಅದಾನಿ ಎಂಟರ್‌ಪ್ರೈಸಸ್, ಪವರ್ ಗ್ರಿಡ್, ಶ್ರೀರಾಮ್ ಫೈನಾನ್ಸ್ ಮತ್ತು ಎನ್‌ಟಿಪಿಸಿ ಗಮನಾರ್ಹ ಲಾಭಗಳೊಂದಿಗೆ ಮಾರುಕಟ್ಟೆಯ ರ್ಯಾಲಿಯನ್ನು ಮುನ್ನಡೆಸಿದ ಉನ್ನತ ಸ್ಟಾಕ್‌ಗಳಲ್ಲಿ ಸೇರಿವೆ. ದೃಢವಾದ 8.2% ಹಣಕಾಸಿನ ಬೆಳವಣಿಗೆಯನ್ನು ಸೂಚಿಸುವ ಇತ್ತೀಚಿನ ಜಿಡಿಪಿ (GDP) ದತ್ತಾಂಶವು ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ.
ಶನಿವಾರ ಪ್ರಕಟಗೊಂಡ 12 ಎಕ್ಸಿಟ್ ಪೋಲ್‌ಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 365 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ. ಕೇಂದ್ರದಲ್ಲಿ ಸರ್ಕಾರ ರಚಿಸಲು ಪಕ್ಷ ಅಥವಾ ಮೈತ್ರಿಕೂಟಕ್ಕೆ ಕನಿಷ್ಠ 272 ಸ್ಥಾನಗಳ ಅಗತ್ಯವಿದೆ.
ವಿಶ್ಲೇಷಕರ ಪ್ರಕಾರ, ಮಾರುಕಟ್ಟೆಯು ರಾಜಕೀಯ ಸ್ಥಿರತೆಗೆ ಆದ್ಯತೆ ನೀಡುತ್ತದೆ ಮತ್ತು ಸರ್ಕಾರದ ಬದಲಾವಣೆಯು ಸಾಮಾನ್ಯವಾಗಿ ಷೇರು ಮಾರುಕಟ್ಟೆಯಲ್ಲಿ ಚಂಚಲತೆಯನ್ನು ಉಂಟುಮಾಡುತ್ತದೆ.
ಎಕ್ಸಿಟ್ ಪೋಲ್ ಮುನ್ನೋಟಗಳನ್ನು ಬಿಜೆಪಿ ಸ್ವಾಗತಿಸಿದರೆ, ಪ್ರತಿಪಕ್ಷಗಳು ತಳ್ಳಿಹಾಕಿವೆ ಮತ್ತು ಮತ ಎಣಿಕೆ ದಿನ ಸಂಪೂರ್ಣ ವಿಭಿನ್ನ ಚಿತ್ರಣ ಬರಲಿದೆ ಎಂದು ವಿಪಕ್ಷಗಳು ಹೇಳಿವೆ.ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ವಿರೋಧ ಪಕ್ಷದ ನಾಯಕರ ಸಭೆಯ ನಂತರ ಶನಿವಾರ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಒಟ್ಟು 543 ಸ್ಥಾನಗಳಲ್ಲಿ ಇಂಡಿಯಾ ಮೈತ್ರಿಕೂಟವು ಕನಿಷ್ಠ 295 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ