ಕುಮಟಾ : ಹವ್ಯಕರ ಭಾಷೆ, ಸಂಪ್ರದಾಯಗಳು ಸೊಗಸು, ಸೊಗಡಿನಿಂದ ಕೂಡಿದೆ, ಹವ್ಯಕರ ಆಚಾರ-ವಿಚಾರಗಳು, ಖಾದ್ಯಗಳು, ತಿಂಡಿ-ತಿನಿಸುಗಳನ್ನು ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ, ಹವ್ಯಕರ ಹಾಡು, ಹವ್ಯಕರ ಗ್ರಾಮೀಣ ಕ್ರೀಡೆಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಹವ್ಯಕರ ಕರ್ತವ್ಯ ಎಂದು ಪ್ರೊ. ಡಿ. ಪಿ. ಹೆಗಡೆ ಹೇಳಿದರು.
ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ -ಗುಡೆ ಅಂಗಡಿ ಹವ್ಯಕ ವಲಯದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉಪನಯನ, ಸಂಧ್ಯಾ ವಂದನೆ, ಸ್ತೋತ್ರಗಳು ಹಾಗೂ ಮಂತ್ರಗಳ ಪಠಣ ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ ಹಾಗೂ ಬುದ್ಧಿಮತ್ತೆ ಹೆಚ್ಚಿಸುವ ಕೆಲಸ ಮಾಡುತ್ತದೆ. ಗುಡೆ ಅಂಗಡಿ ಹವ್ಯಕ ವಲಯವು ಹವ್ಯಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಜ್ಞಾನಾರ್ಜನೆಗೆ ಸಹಕರಿಸುತ್ತಿರುವುದು ಹಾಗೂ ಗ್ರಾಮೀಣ ಕ್ರೀಡೆ ನಡೆಸುತ್ತ ಬಂದಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಹವ್ಯಕರ ಸಂಪ್ರದಾಯ ಉಳಿಸುವಲ್ಲಿ ಶ್ರಮಿಸುತ್ತಿರುವ 90 ವರ್ಷದ ನರಸಿಂಹ ಪರಮೇಶ್ವರ ಭಟ್ಟ ಅವರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಹವ್ಯಕ ವಟು ಉಪನಯನ ಕಾರ್ಯ ನಡೆಯಿತು. ವಾರ್ಷಿಕೋತ್ಸವದ ನಿಮಿತ್ತ ಮನರಂಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಹವ್ಯಕ ಸಂಘದ ಅಧ್ಯಕ್ಷ ಕೆ.ಆರ್. ಭಟ್ಟ, ಉಪಾಧ್ಯಕ್ಷ, ಗ್ರಾಪಂ ಅಧ್ಯಕ್ಷ ಎಂ.ಎಂ. ಹೆಗಡೆ, ಎನ್.ವಿ.ಹೆಗಡೆ, ಡಾ.ಎಸ್. ಎಸ್. ಹೆಗಡೆ, ಡಾ.ಆರ್.ವಿ. ಭಟ್ಟ, ತೆಪ್ಪದ ಶ್ರೀ ಲಕ್ಷ್ಮೀನರಸಿಂಹ ದೇವಾಲಯ ಧರ್ಮದರ್ಶಿ ಪ್ರೊ ವಿ.ಎಸ್. ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ