ಬೆಂಗಳೂರು: ರೇವ್ ಪಾರ್ಟಿಯಲ್ಲಿ (Rave Party) ಮಾದಕ ವಸ್ತು ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ (Telugu actress Hema) ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ನಟಿ ಹೇಮಾ ಹಾಜರಾಗಿದ್ದು, ಈ ವೇಳೆ ಅವರನ್ನು ಸಿಸಿಬಿ ತನಿಖಾಧಿಕಾರಿಗಳು ಬಂಧಿಸಿದ್ದಾರೆ.
ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ಹೇಮಾ ರಿಪೋರ್ಟ್ ಪಾಸಿಟೀವ್ ಬಂದಿತ್ತು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಅನಾರೋಗ್ಯದ ನೆಪ ಹೇಳಿ ವಿಚಾರಣೆಗೆ ಹಾಜರಾಗದೇ ಸಮಯಾವಕಾಶ ಕೇಳಿದ್ದರು. ಹಾಜರಾಗದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು 2ನೇ ನೋಟಿಸ್ ಕೂಡ ನೀಡಿದ್ದರು.
ಇಂದು, ಸೋಮವಾರ ಸಂಜೆ 4 ಗಂಟೆಗೆ ಬೆಂಗಳೂರಿಗೆ ಆಗಮಿಸಿರುವ ಅವರು ಬುರ್ಖಾ ತೊಟ್ಟು ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ನಟಿಯನ್ನು ಬಂಧಿಸಲಾಗಿದೆ.
ಮೇ 19ರಂದು ಎಲೆಕ್ಟ್ರಾನಿಕ್ ಸಿಟಿಯ (Electronic city) ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ನಟಿ ಹೇಮಾ ಸೇರಿ 86 ಮಂದಿ ಮಾದಕ ವಸ್ತು ಸೇವಿನೆ ಮಾಡಿರುವುದು ದೃಢಪಟ್ಟಿತ್ತು.
ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ನಟಿ ಹಾಜರಾಗಿದ್ದರು.
ಡ್ರಗ್ಸ್ ಮತ್ತು ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗೆಯೇ ತಾವು ಬೇರೆ ಕಡೆ ಇರುವುದಾಗಿ ವೀಡಿಯೊ ಮಾಡಿ ಪೊಲೀಸ್ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ ಆರೋಪದ ಮೇಲೆ ನಟಿಯನ್ನು ವಶಕ್ಕೆ ಪಡೆದಿದ್ದು, ಮಂಗಳವಾರ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಯಿದೆ. ರೇವ್ ಪಾರ್ಟಿಯನ್ನು ಆಯೋಜನೆ ಮಾಡಿರುವ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ