ಪರಿಸರ ಪ್ರೇಮಿ, ಜಲಸಾಕ್ಷರತೆಯ ಹರಿಕಾರ ಭಾಲಚಂದ್ರ ಜಾಬಶೆಟ್ಟಿ

(ಇಂದು (೫.೦೬.೨೦೨೪) ವಿಶ್ವಪರಿಸರ ದಿನ, ಪರಿಸರ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಭಾಲಚಂದ್ರ ಜಾಬಶೆಟ್ಟಿ ಬಗ್ಗೆ ಲೇಖನ)
ಅನುಭವ, ಅವಿಷ್ಕಾರ, ಅನುಷ್ಠಾನ ಹಾಗೂ ಅಭಿವೃದ್ಧಿ ಎಂಬ ಕಾರ್ಯಶೈಲಿಯೊಂದಿಗೆ ಪರಿಸರ ಸಂರಕ್ಷಣೆ, ಜಲಸಾಕ್ಷರತೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಸಾವಯವ ಕೃಷಿ, ಮಹಿಳಾ ಸಬಲೀಕರಣ, ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಸರ್ವತೋಮುಖ ಅಭಿವೃದ್ಧಿ ಮುಂತಾದ ಅನೇಕ ಕ್ಷೇತ್ರಗಳಲ್ಲಿ ನೂತನ ಪರಿಕಲ್ಪನೆಗಳನ್ನು ಹುಟ್ಟುಹಾಕಿ, ಅವಿಷ್ಕಾರಗೊಳಿಸಿ, ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ, ಆರ್ಥಿಕ, ಸಾಮಾಜಿಕ, ಪರಿಸರ ಉನ್ನತೀಕರಣಗಳಲ್ಲಿ ನಿರಂತರ ಯತ್ನಿಸುತ್ತಿರುವ ಪರಿಸರ ರಕ್ಷಕ ಬೆಳಗಾವಿ ಜಿಲ್ಲೆಯ ರಾಮದುರ್ಗದ ಭಾಲಚಂದ್ರ ಜಾಬಶೆಟ್ಟಿ ಅವರು.
ಬಿ.ಎಸ್.ಸಿ. ಪದವಿ ಹಾಗೂ ಅರ್ಥಶಾಸ್ತ್ರದಲ್ಲಿ ಎಂ.ಎ. ಪಡೆದಿರುವ ಭಾಲಚಂದ್ರ ಜಾಬಶೆಟ್ಟಿ ಅವರು ಕ್ರಯ ಪರಿಣಾಮಕಾರಿ ಕಡಿಮೆ ವೆಚ್ಚದ/ ಶೂನ್ಯ ಪರಿಸರ ಪೂರಕ ಚಟುವಟಿಕೆಗಳನ್ನು ಹುಟ್ಟುಹಾಕುವಲ್ಲಿ ಪರಿಣಿತರಾಗಿದ್ದಾರೆ, ಪರಿಸರ ಸ್ನೇಹಿ ಜೀವನ ಶೈಲಿಯನ್ನು ಮಕ್ಕಳು ಬಾಲ್ಯದಲ್ಲಿಯೇ ಅಳವಡಿಸಿಕೊಳ್ಳಲು ಇವರು ಪ್ರೇರಕ ಶಕ್ತಿಯಾಗಿದ್ದಾರೆ. ಭಾಷೆ, ಗಣಿತ ಹಾಗೂ ಮಾನಸಿಕ ಯೋಗ್ಯತಾ ಕ್ಷೇತ್ರಗಳಲ್ಲಿ ಪ್ರೌಢಿಮೆ ಬೆಳಸಿ, ಮಕ್ಕಳಲ್ಲಿ ಕುತೂಹಲ ಸೃಷ್ಟಿಸಿ ಅವರನ್ನು ಅಧ್ಯಯನಶೀಲರು ಹಾಗೂ ಕ್ರಿಯಾಶೀಲರನ್ನಾಗಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸರಾಗವಾಗಿ ಎದುರಿಸಿ ಯಶಸ್ವಿಯಾಗುವಂತೆ ಮಾರ್ಗದರ್ಶನ ನೀಡಿದ್ದಾರೆ. ೫ನೇ ವರ್ಗ ಮಕ್ಕಳಿಂದಲೆ ‘ಸವೋದಯ ಶತಕ’ ಎಂಬ ಗಣಿತ ಪುಸ್ತಕ ಬರೆಸಿ, ಮುದ್ರಿಸಿ ಮಕ್ಕಳಿಂದಲೇ ಪ್ರಕಟಿಸಿದ್ದಾರೆ.

ಮಕ್ಕಳಲ್ಲಿ ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಬೆಳಗಿನ ಜಾವ ೪.೦೦ ಗಂಟೆಗೆ ಬಯಲು ಪ್ರದೇಶಕ್ಕೆ ಕರೆದೊಯ್ದು ಆಕಾಶ ಕಾಯಗಳ ಮತ್ತು ಉಲ್ಕಾಪಾತದ ವೀಕ್ಷಣೆ ಹಾಗೂ ಮಾಹಿತಿ ಹಂಚಿಕೆ ಮುಂತಾದವುಗಳನ್ನು ತಾವೇ ಕಟ್ಟಿದ “ಮುಗಿಲಿಗೆ ಬಾಗಿಲು” ಎಂಬ ವೇದಿಕೆ ಮೂಲಕ ಬ್ರಹ್ಮಾಂಡದ ಪರಿಕಲ್ಪನೆ ಮೂಡಿಸುವಲ್ಲಿ ಶ್ರಮಿಸಿದ್ದಾರೆ.
ಬೆಂಗಳೂರಿನ ಪಬ್ಲಿಕ್ ಅಫೇರ‍್ಸ್ ಸೆಂಟರ್, ದೇಶಪಾಂಡೆ ಫೌಂಡೇಶನ್, ಹುಬ್ಬಳ್ಳಿ-ಧಾರವಾಡ ಮಹಾನಗರಗಳ ಪಾಲಿಕೆಯ ಸಹಯೋಗದಿಂದ ೨೦೦೭ನೇ ಇಸ್ವಿಯಲ್ಲಿ ಆಯೋಜಿಸಲಾಗಿದ್ದ “ಪೌರ ಪ್ರಜ್ಞೆಗಾಗಿ ಮಕ್ಕಳ ಆಂದೋಲನ ಅಂಗವಾಗಿ ಹುಬ್ಬಳ್ಳಿ ೨೦ ಪ್ರೌಢಶಾಲೆಗಳ ೧೦೦೦ ವಿದ್ಯಾರ್ಥಿಗಳಿಗೆ ಪೌರಪ್ರಜ್ಞೆ, ಜಲಸಾಕ್ಷರತೆ, ತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆ, ಸಂಚಾರಿ ಶಿಸ್ತು ಹಾಗೂ ಸ್ವಯಂಸೇವಾ ಮನೋಭಾವದ ಬೆಳವಣಿಗೆ ಮುಂತಾದವುಗಳ ಕುರಿತು ತರಬೇತಿ ನೀಡಿದ್ದಾರೆ.
೨೧ನೇ ಶತಮಾದ ಪ್ರಥಮ ದಶಕದ ಪ್ರಥಮಾರ್ಧದಲ್ಲಿ ಭೀಕರ ಬರಗಾಲ ಇವರ ಜೀವನ ಶೈಲಿಯನ್ನೇ ಬದಲಾಯಿಸಿತು. ಬರಗಾಲದ ಸಂದರ್ಭದಲ್ಲಿ ಕುಡಿಯುವ ನೀರು ಸಂಗ್ರಹಿಸಲು ಮಧ್ಯರಾತ್ರಿ ಮಹಿಳೆಯರು ಪರದಾಡುತ್ತಿರುವುದನ್ನು ಕಂಡು ಇವರು ತಮ್ಮ ಜೀವನಾಧಾರವಾಗಿದ್ದ ನೌಕರಿಯನ್ನೇ ತೊರೆದು ‘ಜಲಸಾಕ್ಷರತೆ’ಗಾಗಿ ತಮ್ಮ ಜೀವನ ಮುಡುಪಾಗಿಟ್ಟರು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೂ ಇವರ ನಿರ್ಧಾರ ಅಚಲವಾಗಿತ್ತು. ನೂರಾರು ಗ್ರಾಮಗಳಲ್ಲಿ ಸಂಚರಿಸಿ ನೀರನ ಮಹತ್ವ ಸಾರಿದರು. ‘ಜಲ ಸ್ವಾತಂತ್ರ್ಯ ಸಂಗ್ರಾಮ’ವನ್ನು ಆಂದೋಲನದ ಮೂಲಕ ತನ್ಮೂಲಕ ಮಳೆನೀರಿನ ಕೊಯ್ಲು, ಜಲಸಂಕ್ಷಣೆ, ಕನಿಷ್ಠ ಬೆಳೆ ಉತ್ಪಾದಿಸುವ, ನೀರಿಂಗಿಸುವ ಸರಳ, ಕಡಿಮೆ ವೆಚ್ಚದ, ಪರಿಸರ ಸ್ನೇಹಿ ತಂತ್ರಜ್ಞಾನಗಳ ವರ್ಗಾವಣೆಗಾಗಿ ಶ್ರಮಿಸುತ್ತಿದ್ದಾರೆ

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

ರೈತರಲ್ಲಿ, ವಿದ್ಯಾರ್ಥಿ ಸಮುದಾಯದಲ್ಲಿ, ಶಿಕ್ಷಕರಲ್ಲಿ ಎನ್.ಎಸ್.ಎಸ್. ಕಾರ್ಯಕರ್ತರಲ್ಲಿ, ಜನಪ್ರತಿನಿಧಿಗಳಲ್ಲಿ, ಅಧಿಕಾರಿಗಳಲ್ಲಿ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ವಿಶಿಷ್ಟ ಮಾದರಿಯ ಕೊಳವೆ ಬಾವಿ ಜಲ ಮರುಪೂರಣ, ಭೂಮ್ಯಂತರ್ಗತ ಮರಲು ಜಲ ಸಂಗ್ರಾಹಕಗಳು, ಪಾಲಿಪ್ರೋಪೈಲಿನ ಡ್ಯಾಮ್ ಮುಂತಾದ ಅನೇಕ ನೂತನ ಅವಿಷ್ಕೃತ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಿ, ಅನುಷ್ಠಾನಗೊಳಿಸಿ ಬರವನ್ನು ಸಮರ್ಥವಾಗಿ ಎದುರಿಸಲು ರೈತರನ್ನು ಸನ್ನದ್ಧಗೊಳಿಸಿದ್ದಾರೆ.
ಸುಸ್ಥಿರ ಕೃಷಿಗಾಗಿ ‘ಜನಸಾಕ್ಷರತೆ’ ಎಷ್ಟು ಮುಖ್ಯವೋ ‘ಕೃಷಿ ತ್ಯಾಜ್ಯ ನಿರ್ವಹಣೆ’ ಯೂ ಅಷ್ಟೇ ಮುಖ್ಯವೆಂದು ಇವರು ಬಲವಾಗಿ ಪ್ರತಿಪಾದಿಸುತ್ತಾರೆ. ಕೃಷಿ ತ್ಯಾಜ್ಯದಿಂದ ಎರೆಗೊಬ್ಬರ, ಜೈವಿಕ ಗೊಬ್ಬರ ಮಾಡುವ ಅಲ್ಪ ವೆಚ್ಚದ ನೂತನ ತಂತ್ರಗಳ ಕುರಿತು ಮಾಹಿತಿ ಸಂಗ್ರಹಿಸಿ, ರೈತರಲ್ಲಿ ಜಾಗೃತಿ ಉಂಟು ಮಾಡುತ್ತಿದ್ದಾರೆ.

ಕೃಷಿ ಮತ್ತು ಮಹಿಳಾ ಸಬಲೀಕರಣ ಇವು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಒಂದಕ್ಕೊಂದು ಪೂರಕವಾಗಿ ನಿಂತಾಗ ಅಭಿವೃದ್ಧಿ ತಂತಾನೆ ಆಗುತ್ತದೆ ಎಂಬುದನ್ನು ಮಾಡಿ ತೋರಿಸಿದ್ದಾರೆ. ೨೦೦೫-೦೬ ನೇ ಸಾಲಿನಲ್ಲಿ ಅಂದಿನ ಸಿ.ಡಿ.ಪಿ.ಓ. ಎಚ್.ಎಸ್. ಪೂಜಾರ ಅವರ ಸಹಕಾರದಿಂದ ರಾಮದುರ್ಗ ತಾಲೂಕಿನ ಹತ್ತುಸಾವಿರ ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರಿಗೆ ಶೂನ್ಯ ವೆಚ್ಚದಲ್ಲಿ ಎರೆಗೊಬ್ಬರ ತಯಾರಿಕೆ ಕುರಿತು ತರಬೇತಿ ನೀಡಿದ್ದಾರೆ. ಕೃಷಿ ಹಾಗೂ ಹೈನುಗಾರಿಕೆ ತ್ಯಾಜ್ಯದಿಂದ ಶೂನ್ಯ ವೆಚ್ಚದಲ್ಲಿ ಎರೆಗೊಬ್ಬರ ತಯಾರಿಕೆಯಿಂದ ಪರಿಸರದ ಉನ್ನತೀಕರಣದೊಂದಿಗೆ ಆರ್ಥಿಕ ಅಭಿವೃದ್ಧಿಯನ್ನು ಸಹ ಹೊಂದಬಹುದೆಂದು ಸಾಬೀತು ಪಡಿಸಿದರು. ಸರಕಾರ ಧನ ಸಹಾಯವಿಲ್ಲದೆ ಸ್ವಯಂ ಪ್ರೇರಣೆಯಿಂದ ಈ ಕಾರ್ಯವನ್ನು ಗುರುತಿಸಿ ಕರ್ನಾಟಕ ಸರ್ಕಾರವು ೨೦೦೬ ರಲ್ಲಿ ಇವರು ಕಾರ್ಯದರ್ಶಿಯಾಗಿದ್ದ ಬೆಳಗಾವಿ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪರಿಸರ ಪ್ರಶಸ್ತಿ ೧,೦೦,೦೦೦ ರೂ. ಗಳ ನಗದು ಬಹುಮಾನ, ಸ್ಮರಣ ಸಂಚಿಕೆ ಹಾಗೂ ಪ್ರಮಾಣ ಪತ್ರವನ್ನು ನೀಡಿದೆ.

ತ್ಯಾಜ್ಯ ವಿಲೇವಾರಿ ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ, ಇವರು ಇದಕ್ಕೆ ಒಂಬತ್ತನೇ ಲಕ್ಷ್ಮೀ ಎಂದು ಕರೆಯುತ್ತಾರೆ. “ತ್ಯಾಜ್ಯ ಲಕ್ಷ್ಮಿ” ಯನ್ನು ನಾವು ಪೂಜಿಸಿದರೆ ಅಷ್ಟಲಕ್ಷ್ಮೀಯರೆಲ್ಲರೂ ನಮ್ಮ ಮನೆ ಬಾಗಿಲಿಗೆ ಬಂದು ವರ ಕೊಡುವರೆಂದು ಬಹಳ ಮಾರ್ಮಿಕವಾಗಿ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ ಬಗ್ಗೆ ಮನವರಿಕೆ ಮಾಡುತ್ತಾರೆ.
ಜಪಾನಿನ ಸಾವಯವ ಕೃಷಿ ವಿಜ್ಞಾನಿ ‘ಡಾ ಟೀರು ಹೀಗಾ” ಅಭಿವೃದ್ಧಿ ಪಡಿಸಿದ ‘ಉಪಕಾರಿ ಸೂಕ್ಷ್ಮಾಣುಗಳ ಬಳಕೆ’ ತಂತ್ರಜ್ಞಾನವನ್ನು ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ಸಿಂಚನ’ ಎಂಬ ಶಿರೋನಾಮೆಯಲ್ಲಿ ಜನಪ್ರಿಯಗೊಳಿಸಿದ ಶ್ರೇಯಸ್ಸು ಭಾಲಚಂದ್ರ ಜಾಬಶೆಟ್ಟಿ ಯವರಿಗೆ ಸಲ್ಲುತ್ತದೆ. ೨೦೧೦ನೇ ಇಸ್ವಿಯಲ್ಲಿ ನಗರ ತ್ಯಾಜ್ಯದ ಮೇಲೆ ಅಮೃತ ಸಿಂಚನ ಮಾಡಿ ಜೈವಿಕ ಗೊಬ್ಬರ ತಯಾರಿಸುವ ಪ್ರಕ್ರಿಯೆ ಹಾಗೂ ತ್ಯಾಜ್ಯದಿಂದ ಹೊರಹೊಮ್ಮುವ ದುರ್ವಾಸನೆ ನಿವಾರಿಸುವಲ್ಲಿ ಯಶಸ್ವಿಯಾದರು.
“ಬಯಲು ಮಲ ವಿಸರ್ಜನಾ ಮುಕ್ತ ಹಾಗೂ ತ್ಯಾಜ್ಯ ಮುಕ್ತ ನಗರಕ್ಕಾಗಿ ಮಕ್ಕಳ ರಾಯಭಾರಿತ್ವದಲ್ಲಿ ಜನಾಂದೋಲನ”, “ನಿರಂತರ ಸಸಿ ನೆಡುವ ಕಾರ್ಯಕ್ರಮ”, “ಭವಿಷ್ಯತ್ತಿನ ಆಮ್ಲಜನಕ ಭದ್ರತೆಗಾಗಿ ಬೀಜದುಂಡೆ ತಯಾರಿಸುವುದು ಮತ್ತು ಪಸರಿಸುವ ಜನಾಂದೋಲನ” ,“ಭೂದೇವಿಗೆ ಬೀಜದುಂಡೆ ಚರಗ ನಮನ” “ಮದ್ದು ಸುಡದಿರಿ ಮುದ್ದು ಮಕ್ಕಳೇ”, “ತ್ಯಾಜ್ಯ ಸುಡದಿರಿ, ಸುಡಲು ಬಿಡದಿರಿ” “ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯದ ಹೊಣೆಗಾರಿಕೆ”, “ಗಟ್ಟಿ ಕಸನಿರ್ವಹಣೆಗೆ ಬುಟ್ಟಿ ಜಾಥಾ”, “ಹಸಿರುವ ಸ್ವರ್ಣ ಸಮೀಕ್ಷೆ”, “ಚರಂಡಿ ಚಿಕಿತ್ಸೆ” ,“ಚೆಲ್ಲದಿರಿ ಕಸವನ್ನು ಚರಂಡಿಯಲ್ಲಿ” ,“ಪ್ಲಾಸ್ಟಿಕ್ ಮುಕ್ತ ನಗರಕ್ಕಾಗಿ ಅಭಿಯಾನ”, “ಜಲಸಾಕ್ಷರತೆ”, “ಜಲ ಸ್ವಾತಂತ್ರ ಸಂಗ್ರಾಮ” ಮುಂತಾದ ಜನಪರ ಆಂದೋಲನಗಳನ್ನು ಸಮುದಾಯದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

ಜಾಬಶೆಟ್ಟಿ ಅವರಿಗೆ “ಪರಿಸರ ಮತ್ತು ಸಮಾಜ ಸೇವೆ ಕ್ಷೇತ್ರದ ಸೇವೆಗಾಗಿ ರಾಷ್ಟ್ರಮಾತಾ ಕಸ್ತೂರಬಾ ಗಾಂಧಿ ಸದ್ಭಾವನಾ ಪುರಸ್ಕಾರ” “ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದ- ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ” “ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ಆಡಳಿತ ಹಾಗೂ ಸೇವೆ ಕ್ಷೇತ್ರದಲ್ಲಿ ಸಿರಿ ಗನ್ನಡ ವರ್ಷದ ವ್ಯಕ್ತಿ ಪುರಸ್ಕಾರ” “ಕರ್ನಾಟಕ ರಾಜ್ಯ ಸರ್ಕಾರವು ನೀಡಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪರಿಸರ ಪ್ರಶಸ್ತಿ ೨೦೦೬” ಸಂದಿವೆ. ಹಲವಾರು ಸಂಘ ಸಂಸ್ಥೆಗಳು ಸನ್ಮಾಸಿವೆ.
ಪರಿಸರ ರಕ್ಷಣೆಯ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂದು ವಿಷಾದಿಸುವ ಅವರು ಪ್ರತಿಯೊಬ್ಬರು ಪರಿಸರ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ಬ್ಲಿಚಿಂಗ್ ಪೌಡರ್, ಫಿನೈಯಿಲ್ ಉಪಯೋಗಿಸುವುದನ್ನು ಬಿಡಬೇಕು ಎನ್ನುತ್ತಾರೆ.
ಬಾಲಚಂದ್ರ ಜಾಬಶೆಟ್ಟಿ ಅವರ ಮಾರ್ಗದರ್ಶನ ಮತ್ತು ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಮತ್ತು ವ್ಯಕ್ತಿಗಳು ಇಂದು ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಸರ, ಸೌರಶಕ್ತಿ, ತ್ಯಾಜ್ಯ ನಿರ್ವಹಣೆ, ಜಲಸಾಕ್ಷರತೆ ಮುಂತಾದ ತರಬೇತಿದಾರರಾಗಿರುವ ಅವರನ್ನು ಮಾಹಿತಿಗಾಗಿ ಸಂಪರ್ಕಿಸಲು ಮೊ: ೯೭೪೧೮೮೮೩೬೫ ಅಥವಾ ಈ-ಮೆಲ್::[email protected] ಸಂಪರ್ಕಿಸಬಹುದಾಗಿದೆ.
-ಡಾ. ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

5 / 5. 1

ಶೇರ್ ಮಾಡಿ :

  1. Ravi Devaraddi

    ಪರಿಸರದ ಪರಿಚಾರಕರು. ಅಪಾರ ಜ್ಞಾನದ ಖಣಜ. ಪ್ರಾಯೋಗಿಕ ಜ್ಞಾನ ಇವರ ಬಲ.

ನಿಮ್ಮ ಕಾಮೆಂಟ್ ಬರೆಯಿರಿ

advertisement