ಸಭೆಗೆ ಆಹ್ವಾನಿಸದೇ ಇರುವುದಕ್ಕೆ ಹನುಮಾನ್ ಬೇನಿವಾಲ್ ತೀವ್ರ ಅಸಮಾಧಾನ : ಇಂಡಿಯಾ ಮೈತ್ರಿಕೂಟದ ಆಂತರಿಕ ಬಿರುಕು ಬಹಿರಂಗ…

ನವದೆಹಲಿ : ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದ ನಾಗೌರ್ ಕ್ಷೇತ್ರವನ್ನು ಗೆದ್ದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ (RLP) ನಾಯಕ ಹನುಮಾನ ಬೇನಿವಾಲ್, ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಗೆ ತಮ್ಮನ್ನು ಆಹ್ವಾನಿಸದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗಿಂತ ಉತ್ತಮ ಪ್ರದರ್ಶನದ ನಂತರ ಇಂಡಿಯಾ ಮೈತ್ರಿಕೂಟ ತನ್ನ ಮೊದಲ ಸಭೆಯನ್ನು ಬುಧವಾರ ನಡೆಸಿತು. ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ(RLP)ವು ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷವಾಗಿದ್ದರೂ, ಪಕ್ಷದ ಏಕೈಕ ಸಂಸದ ಬೇನಿವಾಲ್‌ ಅವರಿಗೆ ಆಹ್ವಾನ ನೀಡಿರಲಿಲ್ಲ.
ಹನುಮಾನ ಬೇನಿವಾಲ್ ಅವರು ತಮ್ಮ ಪಕ್ಷವು ಇಂಡಿಯಾ ಮೈತ್ರಿಕೂಟದ ಪಕ್ಷವಾಗಿದೆ. ಆದರೂ ತಮ್ಮನ್ನು ಆಹ್ವಾನಿಸಲಾಗಿಲ್ಲ. ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (RLP) ಮತ್ತು ನನ್ನನ್ನು ಕಡೆಗಣಿಸಲಾಗುತ್ತಿದೆ. ಇದರಿಂದಾಗಿ ನಾನು ಇಂಡಿಯಾ ಮೈತ್ರಿಕೂಟದ ಬಗ್ಗೆ ಅಸಮಾಧಾನ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಸಭೆಗೆ ಕರೆಯದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ಜೂನ್ 1 ಮತ್ತು ಜೂನ್ 5 ರಂದು ಎರಡು ಬಾರಿ ಸಭೆ ನಡೆಸಲಾಯಿತು. ಆದರೆ ಸಭೆಗೆ ನನಗೆ ಆಹ್ವಾನವಿಲ್ಲ. ನನ್ನನ್ನು ಏಕೆ ಆಹ್ವಾನಿಸಲಿಲ್ಲ? ದಕ್ಷಿಣದಿಂದ ಸಣ್ಣ ಪಕ್ಷಗಳನ್ನು ಆಹ್ವಾನಿಸಿದಾಗ, ಹನುಮಾನ ಬೇನಿವಾಲ್ ಅವರನ್ನು ಏಕೆ ಆಹ್ವಾನಿಸಲಿಲ್ಲ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೂರವಾಣಿ ಮೂಲಕ ಮಾತನಾಡಿ ಸಭೆಗೆ ಆಹ್ವಾನಿಸದಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದರು. “ಅಂತಹ ತಪ್ಪು ಮಾಡಿದರೆ ಅದು ಪ್ರಮಾದ. ದೇಶಕ್ಕೆ ಪ್ರತಿಯೊಬ್ಬ ಸಂಸದರು ಬೇಕಾಗಿದ್ದಾರೆ ಮತ್ತು ಹನುಮಾನ ಬೇನಿವಾಲ್ ಅವರಂತಹವರನ್ನು ಮರೆತಿದ್ದಾರೆ. ಇಂಡಿಯಾ ಮೈತ್ರಿಕೂಟವು ರಾಜಸ್ಥಾನದಲ್ಲಿ 11 ಸ್ಥಾನಗಳನ್ನು ಗೆದ್ದಿದೆ ಎಂದು ಕಾಂಗ್ರೆಸ್ ಸಂಭ್ರಮಿಸಬೇಕು, ಆದರೆ 11 ಸ್ಥಾನ ಗೆಲ್ಲುವುದರಲ್ಲಿ ನಮ್ಮ (RLP) ಪಾತ್ರವಿಲ್ಲವೇ? ನಾನು ಕಾಂಗ್ರೆಸ್‌ನ ಮೂರು ಲಕ್ಷ ಮತಗಳನ್ನು ಪಡೆದಿದ್ದೇನೆ, ಆದರೆ ಇದೇವೇಳೆ ಆರ್‌ಎಲ್‌ಪಿಯ 20 ಲಕ್ಷ ಮತಗಳು ಕಾಂಗ್ರೆಸ್‌ಗೆ ಬಂದಿವೆ, ಇದರಿಂದಾಗಿ ಅವರು ಹೆಚ್ಚು ಸ್ಥಾನಗಳನ್ನು ಪಡೆದರು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

ಕಾಂಗ್ರೆಸ್ ತನ್ನ ಪಕ್ಷವನ್ನು ಒಡೆಯುತ್ತಿದೆ ಎಂದು ಬೇನಿವಾಲ್ ಆರೋಪಿಸಿದರು. ಕಾಂಗ್ರೆಸ್ ಪಕ್ಷವು ತನ್ನ ನಾಯಕ ಉಮ್ಮೇದರಾಮ ಬೇನಿವಾಲ್ ಅವರನ್ನು ಆರ್‌ಎಲ್‌ಪಿ ತೊರೆಯುವಂತೆ ಮಾಡಿ ಅವರನ್ನು ಬಾರ್ಮರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದೆ ಎಂದು ಅವರು ಆರೋಪಿಸಿದರು. ಒಂದು ಕಡೆ ನನ್ನೊಂದಿಗೆ ಮೈತ್ರಿಯ ಮಾತುಗಳನ್ನಾಡುತ್ತಿದ್ದಾರೆ, ಮತ್ತೊಂದೆಡೆ ನನ್ನ ಪಕ್ಷವನ್ನು ಒಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಆದರೆ ನಾನು ಎನ್‌ಡಿಎ ಜೊತೆ ಹೋಗುತ್ತಿಲ್ಲ ಎಂದ ಅವರು, ನಾನು ಇಂದು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಯಲ್ಲಿದ್ದೇನೆ, ಆದರೆ ನಾಳೆ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ” ಎಂದು ಹೇಳಿದರು.

ಹನುಮಾನ್ ಬೇನಿವಾಲ್ ಈ ಹಿಂದೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿದ್ದರು. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಗೂ ಮುನ್ನ ಅವರು ಎನ್‌ಡಿಎಯಿಂದ ಹೊರಬಂದು ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬ್ಲಾಕ್‌ ಜೊತೆ ಮೈತ್ರಿ ಮಾಡಿಕೊಂಡಿದ್ದರು.
ಹನುಮಾನ್ ಬೇನಿವಾಲ್‌ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 2019 ರ ಲೋಕಸಭಾ ಚುನಾವಣೆಯಲ್ಲಿ ನಾಗೌರ್‌ನಿಂದ ಆರ್‌ಎಲ್‌ಪಿ ಅಭ್ಯರ್ಥಿಯಾಗಿ ಗೆದ್ದರು. ಆದರೆ ಕೃಷಿ ಕಾನೂನುಗಳ ವಿಚಾರದಲ್ಲಿ ಅವರು ಡಿಸೆಂಬರ್ 2020 ರಲ್ಲಿ ಎನ್‌ಡಿಎ ತೊರೆದರು. ಈ ಬಾರಿ ಅವರು ನಾಗೌರ್‌ನಿಂದ ಇಂಡಿಯಾ ಮೈತ್ರಿಕೂಟದ ಅಂಗಪಕ್ಷವಾಗಿ ಸ್ಪರ್ಧಿಸಿದ್ದರು.
ಹನುಮಾನ ಬೇನಿವಾಲ್ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ಸಿನ ಜ್ಯೋತಿ ಮಿರ್ಧಾ ಅವರನ್ನು ಸೋಲಿಸಿ ಗೆದ್ದಿದ್ದರು. ಆ ಸಮಯದಲ್ಲಿ ಜ್ಯೋತಿ ಮಿರ್ಧಾ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಬಾರಿಯೂ ಅವರು ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಜ್ಯೋತಿ ಮಿರ್ಧಾ ವಿರುದ್ಧವೇ ಗೆದ್ದಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement