ವೀಡಿಯೊ..| ಬಿಜೆಪಿಗೆ ಜಯ : ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲೇ ಕಾಂಗ್ರೆಸ್‌ ಕಾರ್ಯಕರ್ತರ ಮಾರಾಮಾರಿ…!

ತ್ರಿಶೂರ್‌ : ಶುಕ್ರವಾರ (ಜೂನ್ 7) ಕೇರಳದ ತ್ರಿಶೂರ್‌ನಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಕಚೇರಿಯೊಳಗೆ ಕಾಂಗ್ರೆಸ್ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ದೊಡ್ಡ ಹೊಡೆದಾಟ ನಡೆದಿದೆ. ತ್ರಿಶೂರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಮುರಳೀಧರನ್ ಸೋಲಿನ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾಗ ಈ ಘಟನೆ ನಡೆದಿದೆ.
ಈ ಹಿಂದೆ, ಸಿಪಿಐ(ಎಂ) ಮತ್ತು ಕಾಂಗ್ರೆಸ್ “ಬಿಜೆಪಿ ಈ ಲೋಕಸಭಾ ಸ್ಥಾನವನ್ನು ಗೆಲ್ಲಲು ಸಹಾಯ ಮಾಡಲಾಗಿದೆ” ಎಂದು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿತ್ತು. ಗಮನಾರ್ಹವೆಂದರೆ, ಬಿಜೆಪಿಯ ಸುರೇಶ ಗೋಪಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಐ(ಎಂ)ನ ವಿ.ಎಸ್. ಸುನೀಲಕುಮಾರ ಅವರನ್ನು 74,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸುವ ಮೂಲಕ ಕೇರಳದಲ್ಲಿಯೇ ಬಿಜೆಪಿ ಪಾಲಿಗೆ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಮುರಳೀಧರನ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇದರೊಂದಿಗೆ ಸುರೇಶ ಗೋಪಿ ಕೇರಳದಲ್ಲಿ ಬಿಜೆಪಿಗೆ ಮೊದಲ ಲೋಕಸಭಾ ಸ್ಥಾನವನ್ನು ಗೆದ್ದುಕೊಟ್ಟಿದ್ದಾರೆ.

ಜೂನ್ 4 ರಂದು ಫಲಿತಾಂಶಗಳು ಪ್ರಕಟವಾದ ನಂತರ, ತ್ರಿಶೂರ್ ಜಿಲ್ಲೆಯ ಕಾಂಗ್ರೆಸ್ ಘಟಕದಲ್ಲಿ ಕೆಲವು ಅನಾಮಧೇಯ ಪೋಸ್ಟರ್‌ಗಳು ಡಿಸಿಸಿ ಮುಖ್ಯಸ್ಥ ಜೋಸ್ ವಲ್ಲೂರ್ ಮತ್ತು ತ್ರಿಶೂರ್ ಮಾಜಿ ಸಂಸದ ಟಿ.ಎನ್. ಪ್ರತಾಪನ್ ಅವರನ್ನು ದೂಷಿಸಿದ್ದರಿಂದ ಉದ್ವಿಗ್ನತೆ ಉಂಟಾಗಿದೆ. ಒಂದು ಪೋಸ್ಟರ್‌ನಲ್ಲಿ “ಪ್ರತಾಪನ್‌ಗೆ ಒಂದು ವಾರ್ಡ್‌ನಲ್ಲಿಯೂ ಸೀಟ್ ಇಲ್ಲ” ಮತ್ತು “ಜೋಸ್ ವಲ್ಲೂರ್ ರಾಜೀನಾಮೆ ನೀಡಬೇಕು” ಎಂದು ಬರೆಯಲಾಗಿದೆ.
ನಂತರ ಪರಿಸ್ಥಿತಿ ಉಲ್ಬಣಗೊಂಡಿತು. ಮುರಳೀಧರನ್ ಅವರ ಬೆಂಬಲಿಗರಾದ ಕುಟ್ಟಿಯಾಚಿರ ಮತ್ತು ಸುರೇಶ ಅವರ ಮೇಲೆ ಡಿಸಿಸಿ ಮುಖ್ಯಸ್ಥ ವಲ್ಲೂರ್ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ, ಇದು ಎರಡು ಬಣಗಳ ಬೆಂಬಲಿಗರ ನಡುವೆ ಸಂಪೂರ್ಣ ಘರ್ಷಣೆಗೆ ಕಾರಣವಾಯಿತು.
ನಂತರ ಡಿಸಿಸಿ ಕಚೇರಿಯ ನೆಲ ಮಹಡಿಯಲ್ಲಿ ಕಾಂಗ್ರೆಸ್ ಮುಖಂಡ ಕೆ.ಮುರಳೀಧರನ್ ಅವರ ತಂದೆ ಕೆ.ಕರುಣಾಕರನ್ ಅವರ ಭಾವಚಿತ್ರದ ಮುಂದೆ ಜೀವನ್ ಕುಟ್ಟಿಯಾಚಿರ ಧರಣಿ ನಡೆಸಿದರು. ಅಲ್ಲದೆ, ಮುರಳೀಧರನ್ ಬೆಂಬಲಿಗರು ಕಚೇರಿಗೆ ಬಂದಾಗ ವಾಗ್ವಾದ ತೀವ್ರಗೊಂಡಿತು. ವಾಸ್ತವವಾಗಿ, ಮತ ಎಣಿಕೆಯ ದಿನದಂದೇ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಕೆ.ಮುರಳೀಧರನ್ ಅವರು ಜಿಲ್ಲಾ ಮತ್ತು ರಾಜ್ಯ ನಾಯಕತ್ವವನ್ನು ಟೀಕಿಸಿದರು ಮತ್ತು ಯಾವುದೇ ನಾಯಕರು ತಮ್ಮ ಪರ ಪ್ರಚಾರಕ್ಕೆ ಬಂದಿಲ್ಲ ಎಂದು ಆರೋಪಿಸಿದರು.

ಪ್ರಮುಖ ಸುದ್ದಿ :-   ವಿಜಯಪುರ : 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ 58 ಮಂದಿ ಸಾವಿಗೀಡಾಗಿದ್ದ ಕೊಯಮತ್ತೂರು ಸ್ಫೋಟದ ಆರೋಪಿ ಬಂಧನ

ಚುನಾವಣಾ ಅಂಕಿಅಂಶಗಳ ಪ್ರಕಾರ, ತ್ರಿಶೂರ್‌ನಲ್ಲಿ 2019 ರಲ್ಲಿ ಕಾಂಗ್ರೆಸ್ ಪಕ್ಷದ ಮತಗಳ ಪ್ರಮಾಣವು39.83% ರಿಂದ ಈ ಬಾರಿ 30.08% ಕ್ಕೆ ಕುಸಿದಿದೆ, ಬಿಜೆಪಿಯ ಮತಗಳ ಪ್ರಮಾಣವು 29.19% ರಿಂದ 37.8% ಕ್ಕೆ ಏರಿದೆ. ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮತ ಹಂಚಿಕೆ ಪ್ರಮಾಣ ಬಹುತೇಕ ಒಂದೇ ಆಗಿದ್ದು, 2019 ರಲ್ಲಿ 30.85% ರಿಂದ 2024 ರ ಚುನಾವಣೆಯಲ್ಲಿ 30.95% ಕ್ಕೆ ಸ್ವಲ್ಪ ಹೆಚ್ಚಾಗಿದೆ.
ಫಲಿತಾಂಶ ಪ್ರಕಟವಾದ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತ್ರಿಶೂರ್ ಫಲಿತಾಂಶವನ್ನು ಗಂಭೀರವಾಗಿ ಪರಿಶೀಲಿಸುವಂತೆ ಕರೆ ನೀಡಿದರು. ನಂತರ, ಅವರ ಸಹೋದ್ಯೋಗಿ ಮತ್ತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್ ಅವರು ತ್ರಿಶೂರ್‌ನಲ್ಲಿ ಬಿಜೆಪಿಯ ಗೆಲುವಿಗೆ ಕಾಂಗ್ರೆಸ್ ಸಹಾಯ ಮಾಡಿದೆ ಎಂದು ಹೇಳಿಕೊಂಡರು.

ತ್ರಿಶೂರ್‌ನಲ್ಲಿ ಕಾಂಗ್ರೆಸ್ ಮತಗಳನ್ನು ಬಿಜೆಪಿ ಪಡೆದುಕೊಂಡಿದೆ. ಕಾಂಗ್ರೆಸ್ 86,000 ಮತಗಳನ್ನು ಕಳೆದುಕೊಂಡರೆ, ಗೋಪಿ ಗೆಲುವಿನ ಅಂತರ 74,000 ಆಗಿತ್ತು. ಎಲ್‌ಡಿಎಫ್ ತನ್ನ ಮತಗಳನ್ನು 6,000 ಹೆಚ್ಚಿಸಿಕೊಂಡಿದೆ. ಬಿಜೆಪಿ ಗೆಲ್ಲುವುದಿಲ್ಲ ಎಂದು ನಮ್ಮ ಮೌಲ್ಯಮಾಪನ ಸ್ಪಷ್ಟವಾಗಿತ್ತು. ಆದರೆ ಕಾಂಗ್ರೆಸ್ ಬಿಜೆಪಿಯ ಗೆಲುವಿಗೆ ಸಹಾಯ ಮಾಡಿದೆ ಎಂದು ಅವರು ಆರೋಪಿಸಿದರು. ಬಿಜೆಪಿಯ ತ್ರಿಶೂರ್ ಗೆಲುವಿಗೆ ಪಿಣರಾಯಿ ವಿಜಯನ್ ಕಾರಣ ಎಂದು ವಿರೋಧ ಪಕ್ಷದ ನಾಯಕ ಕಾಂಗ್ರೆಸ್ಸಿನ ವಿ ಡಿ ಸತೀಶನ್ ಬುಧವಾರ ಆರೋಪಿಸಿದ್ದಾರೆ..
ಏತನ್ಮಧ್ಯೆ, ಯುವ ಕಾಂಗ್ರೆಸ್ ಮುಖಂಡರ ಒಂದು ವಿಭಾಗವು ಮುರಳೀಧರನ್ 2019 ರಲ್ಲಿ ತ್ರಿಶೂರ್‌ನಿಂದ ಗೆದ್ದಿದ್ದ ಜಿಲ್ಲಾಧ್ಯಕ್ಷ ಜೋಸ್ ವಲ್ಲೋರ್ ಮತ್ತು ಹಿರಿಯ ನಾಯಕ ಟಿಎನ್ ಪ್ರತಾಪನ್ ರಾಜೀನಾಮೆಗೆ ಒತ್ತಾಯಿಸಿತು. ಇದು ವಿಕೋಕ್ಕೆ ಹೋಗಿ ಘರ್ಷಣೆಗೆ ಕಾರಣವಾಯಿತು. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸಿಸಿ ಕಚೇರಿ ಕಾರ್ಯದರ್ಶಿ ಸಜೀವನ್ ಕುರಿಯಾಚಿರಾ ಅವರ ದೂರಿನ ಮೇರೆಗೆ ತ್ರಿಶೂರ್ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷ ಜೋಸ್ ವಲ್ಲೂರ್ ಮತ್ತು ಪಕ್ಷದ ಇತರ 19 ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಗ್ರಾಮದ ಪದ್ಧತಿ ಉಲ್ಲಂಘಿಸಿ ಮದುವೆ ; ದಂಪತಿಯನ್ನು ನೊಗಕ್ಕೆ ಕಟ್ಟಿ, ಕೋಲಿನಿಂದ ಹೊಡೆದು ಹೊಲ ಉಳುಮೆ ಮಾಡಿಸಿದ ಗುಂಪು

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement