ಬೆಂಗಳೂರು : ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಯಡಿಯೂರಪ್ಪ ಅವರ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ಸಂರಕ್ಷಣಾ ಕಾಯ್ದೆ, 2012 (ಪೋಕ್ಸೊ ಕಾಯ್ದೆ) ಅಡಿಯಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಶುಕ್ರವಾರ ಅವರ ಬಂಧನಕ್ಕೆ ತಡೆ ನೀಡಿದೆ.
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವರೆಗೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ ಅಥವಾ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿರುವ ಹೈಕೋರ್ಟ್ ಯಡಿಯೂರಪ್ಪ ಅವರಿಗೆ ಜೂನ್ 17 ರಕ್ಕೆ ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಯಡಿಯೂರಪ್ಪ ಅವರನ್ನು ಬಂಧಿಸುವ ಅಗತ್ಯವೇನೆಂದು ನ್ಯಾಯಮೂರ್ತಿ ಎಸ್ ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು. ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದು, ಪಲಾಯನ ಮಾಡುವ ಸಾಧ್ಯತೆ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಯಡಿಯೂರಪ್ಪ ಅವರು ಜೂನ್ 11 ರ ನೋಟಿಸ್‌ಗೆ ಉತ್ತರಿಸಿದ್ದು, ಜೂನ್ 17 ರಂದು ತನಿಖಾಧಿಕಾರಿಯ ಮುಂದೆ ಹಾಜರಾಗುವುದಾಗಿ ತಿಳಿಸಿದ್ದರು ಎಂದು ಕೋರ್ಟ್ ಗಮನಿಸಿದೆ.
“ಅವರು ಯಾರೋ ಟಾಮ್, ಡಿಕ್ ಅಥವಾ ಹ್ಯಾರಿ ಅಲ್ಲ. ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ. ನಿಮ್ಮ ಪ್ರಕರಣದಲ್ಲಿ ಅವರು ದೇಶದಿಂದ ಓಡಿಹೋಗುತ್ತಾರೆಯೇ? ಎಂದು ಕೋರ್ಟ್ ಪ್ರಶ್ನಿಸಿದೆ
ಏಕಸದಸ್ಯಪೀಠವು ಅಂತಿಮವಾಗಿ ಯಡಿಯೂರಪ್ಪ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಆದೇಶಿಸಿದೆ, ವಿಶೇಷವಾಗಿ ಯಡಿಯೂರಪ್ಪ ಅವರು ಜೂನ್ 17 ರಂದು ತನಿಖಾಧಿಕಾರಿಯ ಮುಂದೆ ಹಾಜರಾಗಲು ಲಿಖಿತವಾಗಿ ತಿಳಿಸಿದ್ದಾರೆ ಎಂದು ಅದು ಗಮನಿಸಿದೆ.
“ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಈ ವಯಸ್ಸಿಗೆ ಸಹಜವಾದ ಕಾಯಿಲೆಗಳನ್ನು ಹೊಂದಿರುವ ಅರ್ಜಿದಾರರನ್ನು ಕಸ್ಟಡಿ ವಿಚಾರಣೆಗಾಗಿ ಬಂಧಿಸಲು ಮತ್ತು ಬಂಧನದಲ್ಲಿರಿಸಲು ಪ್ರಕರಣವನ್ನು ನಾವು ತಕ್ಷಣವೇ ತೀರ್ಮಾನಿಸಲಾಗುವುದಿಲ್ಲ … ಅರ್ಜಿದಾರರ ಬಂಧನವನ್ನು ಮುಂದಿನ ವಿಚಾರಣೆಯ ದಿನಾಂಕದ ವರೆಗೆ ತಡೆಹಿಡಿಯಲಾಗಿದೆ, ”ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
ಹಲವು ಬಾರಿ ನೋಟಿಸ್ ನೀಡಿದರು ಆರೋಪಿ ಹಾಜರಾಗುತ್ತಿಲ್ಲವೆಂದು ಸಿಐಡಿ ಕೋರ್ಟ್ ಮೊರೆ ಹೋಗಿತ್ತು. ಗುರುವಾರ ಬೆಂಗಳೂರು ವಿಶೇಷ ನ್ಯಾಯಾಲಯವು ಬಂಧನಕ್ಕೆ ವಾರೆಂಟ್ ಹೊರಡಿಸಲು ಆದೇಶಿಸಿತ್ತು. ಆದರೆ, ಹೈಕೋರ್ಟ್‌ನಲ್ಲಿ ಬಂಧನ ಮಾಡದಂತೆ ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ವಿಚಾರಣೆ ವರೆಗೆ ಯಡಿಯೂರಪ್ಪ ಅವರನ್ನು ಬಂಧನ ಮಾಡದಂತೆ ಸೂಚಿಸಿದೆ ಹಾಗೂ ಜೂನ್ 17ಕ್ಕೆ ತನಿಖೆಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೂ ಸೂಚಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ