ಈ ಲೋಕಸಭೆಯಲ್ಲಿ 93%ರಷ್ಟು ಸಂಸದರು ಕೋಟ್ಯಧಿಪತಿಗಳು: ಟಾಪ್‌ 10 ಶ್ರೀಮಂತ ಲೋಕಸಭಾ ಸದಸ್ಯರ ಆಸ್ತಿ ಎಷ್ಟು ಗೊತ್ತೆ..? ಇಲ್ಲಿದೆ ಮಾಹಿತಿ

ನವದೆಹಲಿ : 18ನೇ ಲೋಕಸಭೆಗೆ ಚುನಾಯಿತರಾದ 543 ಸಂಸದರಲ್ಲಿ 504 ಅಥವಾ 93 ಪ್ರತಿಶತದಷ್ಟು ಮಂದಿ ಕೋಟ್ಯಧಿಪತಿಗಳಾಗಿದ್ದು, ಹಿಂದಿನ ಎರಡು ಸಾರ್ವತ್ರಿಕ ಚುನಾವಣೆಗಳಿಗೆ ಹೋಲಿಸಿದರೆ ಇದು ಗಮನಾರ್ಹ ಹೆಚ್ಚಳವಾಗಿದೆ. ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಪ್ರಕಾರ, 2019 ರಲ್ಲಿ ಚುನಾಯಿತ ಸಂಸದರಲ್ಲಿ 88%ರಷ್ಟು ಸಂಸದರು ಕೋಟ್ಯಧಿಪತಿಗಳಾಗಿದ್ದರೆ, 2014 ರಲ್ಲಿ 82# ರಷ್ಟು ಸಂಸದರು ಕೋಟ್ಯಧಿಪತಿಗಳಾಗಿದ್ದಾರೆ.
ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡು ವಾರಗಳ ನಂತರ 18ನೇ ಲೋಕಸಭೆ ಚುನಾವಣೆಯ ಮೊದಲ ಅಧಿವೇಶನ ಜೂನ್ 24 ರಂದು ಪ್ರಾರಂಭವಾಗಲಿದೆ.
ಲೋಕಸಭೆಯ ಟಾಪ್ 10 ಶ್ರೀಮಂತ ಸದಸ್ಯರ ಪಟ್ಟಿ-
1. ಡಾ.ಚಂದ್ರಶೇಖರ ಪೆಮ್ಮಸಾನಿ, ತೆಲುಗು ದೇಶಂ ಪಕ್ಷ (TDP)
ಟಿಡಿಪಿಯ ಡಾ.ಚಂದ್ರಶೇಖಋ ಪೆಮ್ಮಸಾನಿ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಚುನಾಯಿತರಾದ ಅತ್ಯಂತ ಶ್ರೀಮಂತ ಸಂಸದರಾಗಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 5,705 ಕೋಟಿ ರೂ.ಗಳು. ಪೆಮ್ಮಸಾನಿ ಅವರು ಆಂಧ್ರಪ್ರದೇಶದ ಗುಂಟೂರು ಕ್ಷೇತ್ರದಿಂದ ಸ್ಪರ್ಧಿಸಿದರು ಮತ್ತು ಅವರ ಸಮೀಪದ ಪ್ರತಿಸ್ಪರ್ಧಿ ವೈಎಸ್‌ಆರ್‌ಸಿಪಿಯ ಕಿಲಾರಿ ವೆಂಕಟ ರೋಸಾಲಾ ಅವರನ್ನು 3.44 ಲಕ್ಷ ಮತಗಳಿಂದ ಸೋಲಿಸಿದರು. ಅವರು ಕೇಂದ್ರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಸಚಿವಾಲಯದ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
2. ಕೊಂಡಾ ವಿಶ್ವೇಶ್ವರ ರೆಡ್ಡಿ, ಭಾರತೀಯ ಜನತಾ ಪಕ್ಷ (BJP)
ಬಿಜೆಪಿಯ ಕೊಂಡ ವಿಶ್ವೇಶ್ವರ ರೆಡ್ಡಿ ಅವರು 4,568 ಕೋಟಿ ರೂ.ಗಳಿಗೂ ಅಧಿಕ ಆಸ್ತಿ ಘೋಷಿಸಿರುವ ಎರಡನೇ ಶ್ರೀಮಂತ ಸಂಸದರಾಗಿದ್ದಾರೆ. ತೆಲಂಗಾಣದ ಚೆವೆಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರೆಡ್ಡಿ ಅವರು ಕಾಂಗ್ರೆಸ್‌ನ ಗದ್ದಂ ರಂಜಿತ್ ರೆಡ್ಡಿ ಅವರನ್ನು ಸುಮಾರು 1.72 ಲಕ್ಷ ಮತಗಳಿಂದ ಸೋಲಿಸಿದ್ದಾರೆ.
3. ನವೀನ ಜಿಂದಾಲ್, ಬಿಜೆಪಿ (BJP)
ಬಿಜೆಪಿ ನಾಯಕ ನವೀನ ಜಿಂದಾಲ್ ಅವರು ಒಟ್ಟು 1,241 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದು, 18ನೇ ಲೋಕಸಭೆಯಲ್ಲಿ ಮೂರನೇ ಅತ್ಯಂತ ಶ್ರೀಮಂತ ಸಂಸದರಾಗಿದ್ದಾರೆ. ಅವರು ದೇಶದ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವರು ಮತ್ತು ಜಿಂದಾಲ್ ಸ್ಟೀಲ್ ಮತ್ತು ಪವರ್‌ನ ಅಧ್ಯಕ್ಷರಾಗಿದ್ದಾರೆ. ಜಿಂದಾಲ್ ಹರಿಯಾಣದ ಕುರುಕ್ಷೇತ್ರ ಕ್ಷೇತ್ರದಿಂದ ಸ್ಪರ್ಧಿಸಿ ಆಮ್ ಆದ್ಮಿ ಪಕ್ಷದ ಸುಶೀಲ ಗುಪ್ತಾ ಅವರನ್ನು ಸುಮಾರು 29,021 ಮತಗಳಿಂದ ಸೋಲಿಸಿದರು.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

4. ಪ್ರಭಾಕರ ರೆಡ್ಡಿ ವೇಮಿರೆಡ್ಡಿ, ಟಿಡಿಪಿ (TDP)
716 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿರುವ ಪ್ರಭಾಕರ ರೆಡ್ಡಿ ವೇಮಿರೆಡ್ಡಿ ಅವರು 18ನೇ ಲೋಕಸಭೆಯಲ್ಲಿ ನಾಲ್ಕನೇ ಶ್ರೀಮಂತ ಸಂಸದರಾಗಿದ್ದಾರೆ. ವಿಪಿಆರ್ ಮೈನಿಂಗ್ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರಾದ ಅವರು ಆಂಧ್ರಪ್ರದೇಶದ ನೆಲ್ಲೂರು ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ವೈಎಸ್‌ಆರ್‌ಸಿಪಿಯ ವೇಣುಂಬಾಕ ವಿಜಯಸಾಯಿ ರೆಡ್ಡಿ ಅವರನ್ನು 2.45 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ.
5. ಸಿ.ಎಂ. ರಮೇಶ, ಬಿಜೆಪಿ (BJP)
ಸಿ.ಎಂ. ರಮೇಶ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಒಟ್ಟು 497 ಕೋಟಿ ರೂ.ಗಳ ಆಸ್ತಿಯನ್ನು ಘೋಷಿಸಿದ್ದಾರೆ. ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಆಂಧ್ರ ಪ್ರದೇಶದ ಅನಕಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದರು ಮತ್ತು ತಮ್ಮ ಸಮೀಪದ ಸ್ಪರ್ಧಿ ವೈಎಸ್‌ಆರ್‌ಸಿಪಿಯ ಬುಡಿ ಮುತ್ಯಾಲ ನಾಯ್ಡು ಅವರನ್ನು 2.96 ಲಕ್ಷ ಮತಗಳಿಂದ ಸೋಲಿಸಿದರು.
6. ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ (BJP)
ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ ಅವರು ಒಟ್ಟು 424 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಮಧ್ಯಪ್ರದೇಶದ ಗುಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಂಧಿಯಾ 5.40 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಿಂಧಿಯಾ ಅವರು ಈಗ ಕೇಂದ್ರ ಸಚಿವ ಸಂಪುಟದಲ್ಲಿ ಸಂಪರ್ಕ ಸಚಿವರಾಗಿ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರಾಗಿ ನೇಮಕಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ತನ್ನ ಬಿಟ್ಟು ಬೇರೊಬ್ಬಳನ್ನು ಮದುವೆಯಾದ ವ್ಯಕ್ತಿ ಸಿಲುಕಿಸಲು 21 ಸಲ ಬಾಂಬ್ ಬೆದರಿಕೆ ಹಾಕಿದ್ದ ಮಹಿಳಾ ರೊಬೊಟಿಕ್ಸ್ ಎಂಜಿನಿಯರ್ ಬಂಧನ...!

7. ಛತ್ರಪತಿ ಶಾಹು ಮಹಾರಾಜ, ಕಾಂಗ್ರೆಸ್ (Congress)
ಕಾಂಗ್ರೆಸ್ ನ ಛತ್ರಪತಿ ಶಾಹು ಮಹಾರಾಜ ಅವರು ಒಟ್ಟು 342 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದ್ದಾರೆ. ಛತ್ರಪತಿ ಶಾಹು ಮಹಾರಾಜ ಮಹಾರಾಷ್ಟ್ರದ ಕೊಲ್ಹಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದು, ತಮ್ಮ ಸಮೀಪದ ಸ್ಪರ್ಧಿ ಶಿವಸೇನೆಯ ಸಂಜಯ ಮಾಂಡ್ಲಿಕ್ ಅವರನ್ನು ಸುಮಾರು 1.54 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ.
8. ಶ್ರೀಭರತ ಮಟ್ಟುಕುಮಿಲ್ಲಿ, ಟಿಡಿಪಿ (TDP)
ಟಿಡಿಪಿಯ ಶ್ರೀಭರತ ಮಟ್ಟುಕುಮಿಲ್ಲಿ ಒಟ್ಟು 298 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ವೈಎಸ್‌ಆರ್‌ಸಿಪಿಯ ಝಾನ್ಸಿ ಲಕ್ಷ್ಮಿ ಬೋಟ್ಚಾ ಅವರನ್ನು 5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ವಿಜಯಶಾಲಿಯಾಗಿದ್ದಾರೆ.
9. ಹೇಮಾ ಮಾಲಿನಿ, ಬಿಜೆಪಿ (BJP)
ಉತ್ತರ ಪ್ರದೇಶದ ಮಥುರಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹಿರಿಯ ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿ ಅವರ ಒಟ್ಟು ಆಸ್ತಿ 278 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಹೇಮಾ ಮಾಲಿನಿ ಅವರು ಕಾಂಗ್ರೆಸ್‌ನ ಮುಖೇಶ ಧಂಗರ್ ವಿರುದ್ಧ 2.93 ಲಕ್ಷ ಮತಗಳ ಅಂತರದಿಂದ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದಾರೆ.
10. ಪ್ರಭಾ ಮಲ್ಲಿಕಾರ್ಜುನ, ಕಾಂಗ್ರೆಸ್ (Congress)
ಪ್ರಭಾ ಮಲ್ಲಿಕಾರ್ಜುನ ಒಟ್ಟು 241 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರು ಕರ್ನಾಟಕದ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಗಾಯಿತ್ರಿ ಸಿದ್ದೇಶ್ವರ ಅವರನ್ನು 26,000 ಮತಗಳಿಂದ ಸೋಲಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement