ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಚೆನಾಬ್ ನದಿ ಮೇಲೆ ನಿರ್ಮಿಸಿರುವ ಜಗತ್ತಿನ ಅತಿ ಎತ್ತರದ ಉಕ್ಕಿನ ಕಮಾನು ರೈಲ್ವೆ ಸೇತುವೆ ಶೀರ್ಘವೇ ಲೋಕಾರ್ಪಣೆಯಾಗಲಿದೆ. ಭಾನುವಾರ (ಜೂನ್ 16) ಈ ರೈಲ್ವೆ ಸೇತುವೆಯಲ್ಲಿ ಪ್ರಾಯೋಗಿಕವಾಗಿ ವ್ಯಾಗನ್ ಟವರ್ ಓಡಿಸಿ ಪರಿಶೀಲನೆ ಮಾಡಲಾಗಿದೆ. ಅಲ್ಲದೆ, ರೈಲ್ವೆ ಇಲಾಖೆ ಉನ್ನತ ಅಧಿಕಾರಿಗಳು ಹಳಿ ಸೇರಿದಂತೆ ಇತರ ತಾಂತ್ರಿಕ ಕೆಲಸಗಳನ್ನು ಪರಿಶೀಲನೆ ನಡೆಸಿದರು.
ಮೊದಲ ಪ್ರಾಯೋಗಿಕ ರೈಲು ಭಾನುವಾರದಂದು ಜಮ್ಮು ಮತ್ತು ಕಾಶ್ಮೀರದ ಸಂಗಲ್ಡಾನ್ನಿಂದ ರಿಯಾಸಿ ವರೆಗೆ ಯಶಸ್ವಿಯಾಗಿ ಓಡಿತು, ಕಣಿವೆ ಮತ್ತು ದೇಶದ ಇತರ ಭಾಗಗಳ ನಡುವಿನ ರೈಲು ಸಂಪರ್ಕವನ್ನು ಪೂರ್ಣಗೊಳಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಪ್ರಕಟಿಸಿದ್ದಾರೆ.
ಶೀಘ್ರದಲ್ಲೇ ರೈಲು ಸೇವೆ ಆರಂಭವಾಗಲಿದೆ ಎಂದು ಕೊಂಕಣ ರೈಲ್ವೇ ಇಂಜಿನಿಯರ್ ದೀಪಕ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. “1ನೇ ಪ್ರಾಯೋಗಿಕ ರೈಲು ಚೆನಾಬ್ ಸೇತುವೆಯನ್ನು ದಾಟುವುದು ಸೇರಿದಂತೆ ಸಂಗಲ್ದಾನ್ನಿಂದ ರಿಯಾಸಿಗೆ ಯಶಸ್ವಿಯಾಗಿ ಓಡಿದೆ. ಎಲ್ಲಾ ನಿರ್ಮಾಣ ಕಾರ್ಯಗಳು ಬಹುತೇಕ ಪೂರ್ಣಗೊಂಡಿವೆ, ಸುರಂಗ ಸಂಖ್ಯೆ 1 ಮಾತ್ರ ಭಾಗಶಃ ಅಪೂರ್ಣವಾಗಿ ಉಳಿದಿದೆ” ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
“ವ್ಯಾಗನ್ ಟವರ್ ರಿಯಾಸಿ ನಿಲ್ದಾಣವನ್ನು ತಲುಪಿದೆ. ನಾವು ಯಶಸ್ವಿಯಾಗಿದ್ದೇವೆ ಎಂದು ನಮಗೆ ತುಂಬಾ ಸಂತೋಷವಾಗಿದೆ ಮತ್ತು ಹೆಮ್ಮೆಯಿದೆ. ಕಾರ್ಮಿಕರು ಮತ್ತು ಇಂಜಿನಿಯರ್ಗಳು ಬಹಳ ಸಮಯದಿಂದ ಶ್ರಮಿಸುತ್ತಿದ್ದಾರೆ ಮತ್ತು ಅವರು ಅಂತಿಮವಾಗಿ ಯಶಸ್ವಿಯಾಗಿದ್ದಾರೆ. ಈ ಸೇತುವೆಯಲ್ಲಿ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಕೊಂಕಣ ರೈಲ್ವೇ ಇಂಜಿನಿಯರ್ ದೀಪಕಕುಮಾರ ತಿಳಿಸಿದ್ದಾರೆ.
1.3 ಕಿ.ಮೀ ಉದ್ದದ ಸೇತುವೆಯು ನದಿಪಾತ್ರದಿಂದ 359 ಮೀಟರ್ ಎತ್ತರದಲ್ಲಿದೆ. ಅಂದರೆ ವಿಶ್ವವಿಖ್ಯಾತ ಐಫೆಲ್ ಟವರ್ಗಿಂತ 35 ಮೀಟರ್ ಎತ್ತರ ಇರಲಿದೆ. ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಕಲ್ಪಿಸುವ ಭಾಗವಾಗಿ ಈ ಸೇತುವೆ ನಿರ್ಮಾಣವಾಗುತ್ತಿದೆ. ಈ ವಿಸ್ಮಯವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ