ಬೆಂಗಳೂರು :ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಪ್ರಕರಣ ದಾಖಲಾಗಿ ಮೂರು ತಿಂಗಳಾಗಿದ್ದು, ಅವರು ಎರಡನೇ ಬಾರಿಗೆ ವಿಚಾರಣೆ ಎದುರಿಸುತ್ತಿದ್ದಾರೆ. ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್, ಡಿವೈಎಸ್‌ಪಿ ತನಿಖಾಧಿಕಾರಿಯಿಂದ ಯಡಿಯೂರಪ್ಪ ವಿಚಾರಣೆ ನಡೆದಿದೆ.
ಸಿಐಡಿ ಅಧಿಕಾರಿಗಳು ಈ ಮೊದಲೇ ಯಡಿಯೂರಪ್ಪ ಅವರ ಧ್ವನಿ ಮಾದರಿಯನ್ನು ಸಂಗ್ರಹಿಸಿ ಕಳುಹಿಸಿದ್ದಾರೆ. ನಂತರ ವಿಚಾರಣೆಗೆ ಹಾಜರಾಗುವಂತೆ ಬಿಎಸ್ ಯಡಿಯೂರಪ್ಪಗೆ ಸಿಐಡಿ ಅಧಿಕಾರಿಗಳು 2 ಬಾರಿ ನೋಟಿಸ್ ನೀಡಿದ್ದರು. ಆದರೆ ವಿಚಾರಣೆಗೆ ಅವರು ಹಾಜರಾಗಿರಲಿಲ್ಲ. ಅವರು ಐದು ದಿನಗಳ ಕಾಲಾವಕಾಶ ಕೋರಿ ಜೂನ್ 17ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು.
ಆದರೆ ಹೇಳಿದ ಸಮಯದಲ್ಲಿ ವಿಚಾರಣೆಗೆ ಹಾಜರಾಗದ ಕಾರಣ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ಕೋರಿ ನಗರದ 1ನೇ ತ್ವರಿತಗತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ ನ್ಯಾಯಪೀಠ ಬಿಎಸ್ವೈ ಜಾಮೀನು ರಹಿತ ವಾರಂಟ್ ಹೊರಡಿಸಲು ಆದೇಶ ಮಾಡಿತ್ತು.
ಈ ಮಧ್ಯೆ ಪ್ರಕರಣವನ್ನು ರದ್ದುಕೋರಿ ಬಿಎಸ್ ಯಡಿಯೂರಪ್ಪ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬಿಎಸ್ ಯಡಿಯೂರಪ್ಪರನ್ನು ಬಂಧಿಸದಂತೆ ನಿರ್ದೆಶನ ನೀಡಿತ್ತು. ಅಲ್ಲದೆ ಜೂನ್ 17 ರಂದು ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪಗೆ ಕೋರ್ಟ್ ಸೂಚಿಸಿತ್ತು. ನಂತರ ಇಂದು ಸೋಮವಾರ ಸಿಐಡಿ ಅಧಿಕಾರಿಗಳ ಮುಂದೆ ಬಿಎಸ್ ವೈ ವಿಚಾರಣೆಗೆ ಹಾಜರಾಗಿದ್ದಾರೆ.
ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಸಂತ್ರಸ್ತೆ ತಾಯಿ ಮಾರ್ಚ್ 3ರಂದು ಮಾಜಿ ಯಡಿಯೂರಪ್ಪ ವಿರುದ್ದ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು , ಪ್ರಕರಣ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ