
ರೀಲ್ಸ್ ಮಾಡಲು ಹೋಗಿ 23 ವರ್ಷದ ಯುವತಿ ಪ್ರಾಣವನ್ನೇ ಕಳೆದುಕೊಂಡ ಘಟನೆ ನಡೆದಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ 23 ವರ್ಷದ ಯುವತಿಯೊಬ್ಬಳು ದತ್ತ ಧಾಮ ದೇವಸ್ಥಾನ ಇರುವ ಬೆಟ್ಟದ ಬಳಿ ಸಾಮಾಜಿಕ ಮಾಧ್ಯಮಕ್ಕಾಗಿ ಕಾರಿನಲ್ಲಿ ಕುಳಿತು ರೀಲ್ ಮಾಡಲು ಪ್ರಯತ್ನಿಸುತ್ತಿದ್ದಾಗ ಕಾರು 300 ಅಡಿ ಆಳದ ಕಮರಿಗೆ ಬಿದ್ದು, ಅದರಲ್ಲಿದ್ದ ಯುವತಿ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲಿ ಕಂಡುಬಂದ ಯುವತಿಯನ್ನು ಶ್ವೇತಾ ಸುರ್ವಾಸೆ ಎಂದು ಗುರುತಿಸಲಾಗಿದ್ದು, ಟೊಯೊಟಾ ಎಟಿಯೋಸ್ ಕಾರು ರಿವರ್ಸ್ ಗೇರ್ನಲ್ಲಿದ್ದಾಗ ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಅನ್ನು ತಪ್ಪಾಗಿ ಒತ್ತಿದ ಕಾರಣ ಕಾರು ವೇಗವಾಗಿ ಹಿಂದಕ್ಕೆ ಚಲಿಸಿ 300 ಅಡಿ ಕಮರಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಸ್ನೇಹಿತರು ಸೂಲಿಭಂಜನದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮಳೆಗಾಲದಲ್ಲಿ, ಸೂಲಿಭಂಜನದ ಬೆಟ್ಟಗಳು ಇಲ್ಲಿ ಕಾಣುವ ಸುಂದರವಾದ ದೃಶ್ಯಾವಳಿಗಳನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರಿಂದ ತುಂಬಿ ತುಳುಕುತ್ತವೆ.

“ಸ್ನೇಹಿತ ಶಿವರಾಜ ಮುಳೆ ವೀಡಿಯೋ ಚಿತ್ರೀಕರಣ ಮಾಡುತ್ತಿರುವಾಗ ಶ್ವೇತಾ ಸರ್ವಾಸೆ ಕಾರನ್ನು ರಿವರ್ಸ್ ಡ್ರೈವಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಕಾರು ರಿವರ್ಸ್ ಗೇರ್ನಲ್ಲಿದ್ದಾಗ ಆಕೆ ಬ್ರೇಕ್ ಒತ್ತುವುದರ ಬದಲಾಗಿ ಆಕಸ್ಮಿಕವಾಗಿ ಎಕ್ಸಲರೇಟರ್ ಒತ್ತಿದ್ದಾರೆ. ಆಗ ಕಾರು ವೇಗವಾಗಿ ಹಿಂದಕ್ಕೆ ಜಾರಿ, ಪ್ರಪಾತದ ಅಂಚಿನಲ್ಲಿದ್ದ ಕ್ರ್ಯಾಶ್ ಬ್ಯಾರಿಯರ್ ಅನ್ನು ಮುರಿದು ಕಣಿವೆಗೆ ಬಿದ್ದಿದೆ. ನಂತರ ರಕ್ಷಣಾ ತಂಡ ಕೂಡಲೇ ಧಾವಿಸದರೂ ಕಾರು ಬಿದ್ದ ಜಾಗ ತಲುಪಲುಒಂದು ತಾಸು ಬೇಕಾಯಿತು. ಆದರೂ ತ್ವರಿತವಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ತಲುಪಿಸಿದರೂ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು” ಎಂದು ಖುತಾಬಾದ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಕಡಿಮೆ ಡ್ರೈವಿಂಗ್ ಅನುಭವ ಹೊಂದಿದ್ದ ಯುವತಿ ಇನ್ಸ್ಟಾಗ್ರಾಮ್ಗಾಗಿ ರೀಲ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಎನ್ಡಿಟಿವಿ ಪ್ರಕಾರ, ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಕಾರು ಕಮರಿನ ಸಮೀಪದ ಬಂಡೆಯಿಂದ ಸುಮಾರು 50 ಮೀಟರ್ ದೂರದಲ್ಲಿತ್ತು. ಆದರೆ, ಯುವತಿ ಬ್ರೇಕ್ ಬದಲು ಎಕ್ಸಲರೇಟರ್ ಒತ್ತಿದ್ದರಿಂದ ಕಾರಿನ ವೇಗ ಹೆಚ್ಚಾಯಿತು. ಆಕೆಯ ಸ್ನೇಹಿತ ಕಾರನ್ನು ನಿಧಾನಗೊಳಿಸುವಂತೆ ಎಚ್ಚರಿಸಿದ್ದಾನೆ. ಹಾಗೂ ದುರ್ಘಟನೆ ತಡೆಯಲು ಪ್ರಯತ್ನಿಸಿದ್ದಾನೆ, ಆದರೆ ಕಾರು ಬಂಡೆಯಿಂದ 300 ಅಡಿ ಕೆಳಗಡೆ ಬಿದ್ದು, ಶ್ವೇತಾ ಸುರ್ವಾಸೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ