ಗೋರಖಪುರ : ಪತ್ನಿ ಮೃತಪಟ್ಟಿದ್ದಾಳೆ ಎಂದು ಆಕೆಯ ಅಂತ್ಯಸಂಸ್ಕಾರ ನಡೆಸಿದ್ದ ಪತಿಗೆ ನಾಲ್ಕು ದಿನಗಳ ನಂತರ ಪತ್ನಿ 600 ಕಿ.ಮೀ. ದೂರದಲ್ಲಿ ಪತ್ತೆಯಾಗಿದ್ದು, ಈಗ ಸತಿ ಪತಿ ಮತ್ತೆ ಒಂದಾಗಿರುವ ಅಸಾಮಾನ್ಯ ಘಟನೆ ಉತ್ತರ ಪ್ರದೇಶದ ಗೋರಖಪುರ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಗೋರಖಪುರದ ಬನ್ಸ್ಗಾಂವ್ನ ನಿವಾಸಿ ರಾಮ ಸುಮೇರ್ (60) ಅವರು ತಮ್ಮ ಪತ್ನಿ ಫೂಲ್ಮತಿ ಜೂನ್ 15 ರಂದು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ದೂರು ದಾಖಲಿಸಿದ್ದರು. ಫೂಲ್ಮತಿ ತನ್ನ ತಂದೆಯ ಮನೆಯಿಂದ ಜೂನ್ 15 ರಂದು ತನ್ನ ಮನೆಗೆ ವಾಪಸ್ ಹೊರಟಿದ್ದಳು. ಆದರೆ ಮನೆಗೆ ಬಂದಿಲ್ಲ ಎಂದು ಸುಮೇರ್ ಪೊಲೀಸರಿಗೆ ದೂರು ನೀಡಿದ್ದರು. ವ್ಯಾಪಕ ಹುಡುಕಾಟ ನಡೆಸಲಾಗಿತ್ತು. ನಾಲ್ಕು ದಿನಗಳ ನಂತರ ಜೂನ್ 19 ರಂದು ಉರುವ ಬಜಾರ್ ಪ್ರದೇಶದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ಸುಮೇರ್ಗೆ ಮಾಹಿತಿ ನೀಡಿದರು. ಮಹಿಳೆಯ ಮೃತದೇಹ ನೋಡಿದ ಸುಮೇರ್ ಇದು ತನ್ನ ಹೆಂಡತಿ ಶವವೆಂದು ಗುರುತಿಸಿದ್ದು, ನಂತರ ಅಂತಿಮ ವಿಧಿಗಳನ್ನು ಪೂರ್ಣಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯನ್ನು ಕತ್ತು ಹಿಸುಕಿ ಸಾಯಿಸಲಾಗಿದೆ ಎಂಬುದು ಗೊತ್ತಾದ ನಂತರ ಪ್ರಕರಣವು ನಿಗೂಢ ಟ್ವಿಸ್ಟ್ ಪಡೆದುಕೊಂಡಿತು. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಮುಂದಾದರು. ಮಹಿಳೆಯ ಶಂಕಿತ ಹಂತಕನನ್ನು ಹಿಡಿಯಲು, ಪೊಲೀಸರು ಫೂಲ್ಮತಿಯ ಮೊಬೈಲ್ ಫೋನ್ ಟ್ರೇಸ್ ಮಾಡಲು ಆರಂಭಿಸಿದರು. ಆಗ ಅವರಿಗೆ ಫೂಲ್ಮತಿಯ ಮೊಬೈಲ್ 600 ಕಿಲೋಮೀಟರ್ ದೂರದ ಝಾನ್ಸಿಯಲ್ಲಿ ಸಕ್ರಿಯವಾಗಿದೆ ಎಂಬುದು ಪತ್ತೆಯಾಯಿತು.
ಫೋನ್ ಕಾಲ್ ದಾಖಲೆಗಳು ಫೂಲ್ಮತಿ ಮತ್ತು ಸುಲ್ತಾನಪುರದ ಶುಭಂ ಎಂಬುವವರ ನಡುವೆ ಆಗಾಗ್ಗೆ ಫೋನ್ನಲ್ಲಿ ಮಾತುಕತೆ ನಡೆಯುತ್ತಿತ್ತು ಗೊತ್ತಾಯಿತು. ಆಗ ಶುಭಂ ಎಂಬಾತನನ್ನು ವಿಚಾರಣೆ ನಡೆಸಿದಾಗ ಫೂಲ್ಮತಿ ಬದುಕಿರುವುದು ಗೊತ್ತಾಯಿತು.
ಆಕೆಯನ್ನು ಝಾನ್ಸಿ ಬಳಿ ಕರೆತಂದು ಬಿಟ್ಟಿರುವುದಾಗಿ ಶುಭಂ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಪೊಲೀಸರು ಶುಭಂ ನೀಡಿದ ವಿಳಾಸದಲ್ಲಿ ಆಕೆಯನ್ನು ಪತ್ತೆ ಹಚ್ಚಿದರು.
ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಶನಿವಾರ ಆಕೆಯನ್ನು ಆಕೆಯ ಪತಿಯ ಜೊತೆ ವಾಪಸ್ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಜಿತೇಂದ್ರಕುಮಾರ ತೋಮರ್ ತಿಳಿಸಿದ್ದಾರೆ. ಈಗ ಶವ ಸಂಸ್ಕಾರವಾದ ಮಹಿಳೆ ಯಾರೆಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಸುಮೇರ್, ಫೂಲ್ಮತಿ, ಶುಭಂ ಮತ್ತು ಶವಸಂಸ್ಕಾರ ಮಾಡಿದ ಮೃತ ಮಹಿಳೆಯ ನಡುವಿನ ಸಂಪರ್ಕದ ಬಗ್ಗೆ ನಿರ್ಧರಿಸಲು ತನಿಖೆ ನಡೆಯುತ್ತಿದೆ.
ಬಾಲಕನೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದು, ಮೃತ ಮಹಿಳೆಯ ಪ್ರಕರಣವನ್ನು ಹೊಸ ಕೋನದಲ್ಲಿ ಮರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ