ಸುಧಾಮೂರ್ತಿ 30 ವರ್ಷಗಳಿಂದ ಸೀರೆಯನ್ನೇ ಖರೀದಿಸಿಲ್ವಂತೆ..! ಅದಕ್ಕೆ ಕಾರಣವನ್ನೂ ಹೇಳಿದ್ದಾರೆ…

ನವದೆಹಲಿ: ರಾಜ್ಯಸಭಾ ಸಂಸದೆ ಹಾಗೂ ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ ಅವರು ತಾವು 30 ವರ್ಷಗಳಿಂದ ಸೀರೆ ಖರೀದಿಸಿಲ್ಲ ಎಂಬುದನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ…! ಕಾರಣ ಕಾಶಿ (ವಾರಾಣಸಿ) ಭೇಟಿಯಂತೆ.
ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ತಮ್ಮ ಅಪಾರ ಸಂಪತ್ತಿನ ಹೊರತಾಗಿಯೂ ತಮ್ಮ ಸರಳತೆಯಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ʼದಿ ವಾಯ್ಸ್ ಆಫ್ ಫ್ಯಾಶನ್‌ʼಗೆ ನೀಡಿದ ಸಂದರ್ಶನದಲ್ಲಿ, ಸುಧಾ ಮೂರ್ತಿ ಅವರು ಈ ವಿಷಯನ್ನು ಹಂಚಿಕೊಂಡಿದ್ದಾರೆ. “ಕಾಶಿಗೆ ಹೋದಾಗ, ನೀವು ತುಂಬಾ ಇಷ್ಟಪಡುವುದನ್ನು ತ್ಯಜಿಸಬೇಕು ಎಂಬುದು ವಾಡಿಕೆ, ನಾನು ಶಾಪಿಂಗ್ ಮಾಡಲು ಇಷ್ಟಪಡುತ್ತೇನೆ, ಆದ್ದರಿಂದ ಶಾಪಿಂಗ್ ತ್ಯಜಿಸುತ್ತೇನೆ ಎಂದು ಹೇಳಿದ್ದೆ. ಅದರಂತೆ ಹಾಗೆಯೇ ಅನುಸರಿಸಿಕೊಂಡು ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.

73ರ ಸುಧಾ ಮೂರ್ತಿ, ಆಕೆಯ ಪೋಷಕರು ಮತ್ತು ಅಜ್ಜಿ ಕನಿಷ್ಠ ಆಸ್ತಿಯೊಂದಿಗೆ ಮಿತವ್ಯಯದ ಸರಳ ಜೀವನವನ್ನು ನಡೆಸಿದ್ದರಿಂದ ಅವರ ಬದ್ಧತೆ ಪ್ರಭಾವ ತನ್ನಲ್ಲಿ ಆಳವಾಗಿ ಬೇರೂರಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
“ಆರು ವರ್ಷಗಳ ಹಿಂದೆ ನನ್ನ ತಾಯಿ ತೀರಿಕೊಂಡಾಗ, ಅವರ ಕಪಾಟಿನಲ್ಲಿದ್ದ ವಸ್ತುಗಳನ್ನು ಹೊರಹಾಕಲು ಕೇವಲ ಅರ್ಧ ಗಂಟೆ ತೆಗೆದುಕೊಂಡಿತು, ಏಕೆಂದರೆ ಅವರ ಬಳಿಯಿದ್ದ ಕೇವಲ 8-10 ಸೀರೆಗಳನ್ನು ಮಾತ್ರ ಇಟ್ಟಿದ್ದರು. ನನ್ನ ಅಜ್ಜಿ 32 ವರ್ಷಗಳ ಹಿಂದೆ ನಿಧನರಾದಾಗ, ಅವರ ಬಳಿ ಕೇವಲ ನಾಲ್ಕು ಸೀರೆಗಳಿದ್ದವು. ಅವರೆಲ್ಲ ನನ್ನ ಬೆಳವಣಿಗೆಯ ಭಾಗವಾಗಿದ್ದರಿಂದ ಸರಳ ಜೀವನವನ್ನು ಅಳವಡಿಸಿಕೊಳ್ಳುವುದು ನನಗೆ ಸುಲಭವಾಗಿದೆ ಎಂದು ಅವರು ಹೇಳಿದರು.
ಮೂರು ದಶಕಗಳಿಂದ ಸುಧಾ ಮೂರ್ತಿ ತಮ್ಮ ಸಹೋದರಿಯರು, ಆಪ್ತ ಸ್ನೇಹಿತರು ಮತ್ತು ಸಾಂದರ್ಭಿಕವಾಗಿ ಅವರು ಕೆಲಸ ಮಾಡುವ ಎನ್‌ಜಿಒಗಳು ಉಡುಗೊರೆಯಾಗಿ ನೀಡಿದ ಸೀರೆಗಳನ್ನೇ ಧರಿಸುತ್ತಿದ್ದಾರೆ. ತಾನು ಕಾಪಾಡಿಕೊಳ್ಳಬೇಕಾದ ಆಸ್ತಿಗಳಲ್ಲಿ, ಇನ್ಫೋಸಿಸ್ ಫೌಂಡೇಶನ್‌ ಮೂಲಕ ತಮ್ಮ ಜೀವನವನ್ನು ಪರಿವರ್ತಿಸಿಕೊಂಡ ಮಹಿಳೆಯರ ಗುಂಪು ತನಗೆ ನೀಡಿದ ಎರಡು ಕೈ ಕಸೂತಿ ಸೀರೆಗಳು ಸೇರಿವೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಭಾರತದ ವಾಯುದಾಳಿಯಲ್ಲಿ ಪಾಕಿಸ್ತಾನದ ಎಡಬ್ಲ್ಯುಎಸಿಎಸ್‌ (AWACS) ವಿಮಾನ ನಾಶವಾಗಿದ್ದನ್ನು ಒಪ್ಪಿಕೊಂಡ ಪಾಕ್‌ ನಿವೃತ್ತ ಏರ್ ಮಾರ್ಷಲ್

ನನ್ನ ಸಹೋದರಿಯರು ಆರಂಭದಲ್ಲಿ ಪ್ರತಿ ವರ್ಷ ಒಂದೆರಡು ಸೀರೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಈಗ ಕೊಟ್ಟಿರುವ ಸೀರೆಯೇ ಬಹಳಷ್ಟಿದೆ ಇನ್ನು ಕೊಡಬೇಡಿ ಎಂದು ಹೇಳಿದ್ದೇನೆ ಎಂದು ಅವರು ಹೇಳಿದ್ದಾರೆ
“ನಾನು ಐವತ್ತು ವರ್ಷಗಳಿಂದ ಸೀರೆಗಳನ್ನು ಉಡುತ್ತಿದ್ದೇನೆ ಮತ್ತು ಸೀರೆ ಉಟ್ಟ ಬಳಿಕ ಅವುಗಳನ್ನು ತೊಳೆದು, ಇಸ್ತ್ರಿ ಮಾಡಿ ಇಟ್ಟುಕೊಳ್ಳುತ್ತೇನೆ, ಸೀರೆ ನೆಲಕ್ಕೆ ತಾಕುವಂತೆ ಎಂದೂ ಉಡುವುದಿಲ್ಲ, ಹಾಗಾಗಿ ಹೆಚ್ಚು ಹೊಲಸಾಗುವುದಿಲ್ಲ, ಹೆಚ್ಚು ವರ್ಷಗಳ ಕಾಲ ಬಾಳಿಕೆಗೆ ಬರುತ್ತದೆ ಎಂದು ಅವರು ಹೇಳಿದರು.
ಸುಧಾಮೂರ್ತಿ ಈ ವಾರದ ಆರಂಭದಲ್ಲಿ ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲಿ, ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರ-ಪ್ರಾಯೋಜಿತ ಲಸಿಕೆ ಕಾರ್ಯಕ್ರಮ ಆರಂಭಿಸುವಂತೆ ಒತ್ತಾಯಿಸಿದರು.. ಅಲ್ಲದೆ, 57 ದೇಶೀಯ ಪ್ರವಾಸಿ ತಾಣಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ಗುರುತಿಸುವಂತೆ ಕರೆ ನೀಡಿದರು.
ಹೆಚ್ಚಾಗಿ ಮಕ್ಕಳಿಗಾಗಿ ಹಲವಾರು ಪುಸ್ತಕಗಳನ್ನು ಬರೆದಿರುವ ಸುಧಾ ಮೂರ್ತಿ ಅವರನ್ನು ಈ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನದಂದು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement