ಹೈದರಾಬಾದ್ : ಕೆ ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷಕ್ಕೆ ಮತ್ತೊಂದು ಆGಆತ ಎದುರಾಗಿದ್ದು, ಬಿಆರ್‌ಎಸ್ ಪಕ್ಷದ ಆರು ವಿಧಾನ ಪರಿಷತ್ ಸದಸ್ಯರು ಶುಕ್ರವಾರ ರಾತ್ರಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಪರಿಷತ್ ಸದಸ್ಯರಲ್ಲಿ ದಂಡೆ ವಿಠ್ಠಲ, ಭಾನು ಪ್ರಸಾದ, ಬಿ ದಯಾನಂದ, ಪ್ರಭಾಕರ ರಾವ್, ಬಸವರಾಜು ಸರಯ್ಯ ಮತ್ತು ಇ ಮಲ್ಲೇಶಂ ಸೇರಿದ್ದಾರೆ. ರೇವಂತ್ ರೆಡ್ಡಿ ಅವರು ಎರಡು ದಿನಗಳ ದೆಹಲಿ ಪ್ರವಾಸದಿಂದ ಗುರುವಾರ ರಾತ್ರಿ ಹೈದರಾಬಾದ್‌ಗೆ ಹಿಂದಿರುಗಿದ ಕೂಡಲೇ ಎಂಎಲ್‌ಸಿಗಳು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಇದರೊಂದಿಗೆ 40 ಸದಸ್ಯರ ವಿಧಾನ ಪರಿಷತ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಬಲ 12ಕ್ಕೆ ಏರಿದೆ. ಬಿಆರ್‌ಎಸ್ ಬಲ ಈಗ 19ಕ್ಕೆ ಕುಸಿದಿದೆ. ನಾಲ್ಕು ನಾಮನಿರ್ದೇಶಿತ ಎಂಎಲ್‌ಸಿಗಳು, ಎಐಎಂಐಎಂನ ಇಬ್ಬರು ಸದಸ್ಯರು, ಬಿಜೆಪಿ, ಪಿಆರ್‌ಟಿಯುನಿಂದ ತಲಾ ಒಬ್ಬರು ಮತ್ತು ಒಬ್ಬ ಸ್ವತಂತ್ರ ಎಂಎಲ್‌ಸಿ, ಎರಡು ಸ್ಥಾನಗಳು ಖಾಲಿ ಇವೆ.
ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಒಟ್ಟು 119 ವಿಧಾನಸಭಾ ಸ್ಥಾನಗಳಲ್ಲಿ ಬಿಆರ್‌ಎಸ್ 39 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 64 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ