ರಾಜ್ಯದ ಶೇ.80ರಷ್ಟು ಜನರ ಬಳಿ ಬಿಪಿಎಲ್‌ ಕಾರ್ಡ್ ; ನಕಲಿ ಕಾರ್ಡ್‌ ರದ್ದತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ರಾಜ್ಯದ ಶೇ.80ರಷ್ಟು ಜನರು ಬಳಿ ಬಿಪಿಎಲ್‌ (BPL) ಕಾರ್ಡ್ ಇದ್ದು, ಯಾರೆಲ್ಲಾ ಬಿಪಿಎಲ್ ಕಾರ್ಡ್‌ ಹೊಂದಲು ಅನರ್ಹರೋ ಅವರನ್ನು ಪತ್ತೆ ಹಚ್ಚಿ ಅಂತಹ ಕಾರ್ಡುಗಳನ್ನು ರದ್ದು ಮಾಡುವಂತೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೋಮವಾರ ಆದೇಶಿಸಿದೆ.
ವಿಧಾನಸೌಧದಲ್ಲಿ ಸೋಮವಾರ ನಡೆದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಸಿಇಒಗಳ ಜೊತೆಗಿನ ಸಭೆಯಲ್ಲಿ ಈ ವಿಚಾರವಾಗಿ ಮುಖ್ಯಮಂತ್ರಿಗಳು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು. ತಮಿಳುನಾಡಿನಲ್ಲಿ ಶೇ.40 ರಷ್ಟಿದೆ. ಆದರೆ ರಾಜ್ಯದಲ್ಲಿ ಶೇ.80 ರಷ್ಟು ಜನರು ಬಿಪಿಎಲ್‌ ಕಾರ್ಡುಗಳನ್ನು ಹೊಂದಿದ್ದಾರೆ. ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ನೀಡಿದ್ದೇವೆ. ಹೀಗಾಗಿ ಅನರ್ಹ ಬಿ.ಪಿ.ಎಲ್. ಕಾರ್ಡುಗಳನ್ನು ರದ್ದು ಪಡಿಸಿ, ಅರ್ಹರಿಗೆ ಮಾತ್ರ ಬಿಪಿಎಲ್‌ ಕಾರ್ಡು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಿಂಚಣಿ ಅರ್ಜಿಗಳು ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಬಾಕಿ ಇವೆ ಎನ್ನುವ ಪಟ್ಟಿ ಪ್ರಸ್ತಾಪಿಸಿದ ಸಿಎಂ ಆಯಾ ಜಿಲ್ಲಾಧಿಕಾರಿಗಳಿಗೆ ಕಾಲಮಿತಿಯೊಳಗೆ ಇತ್ಯರ್ಥ ಮಾಡಬೇಕು ಎಂದು ಸೂಚನೆ ನೀಡಿದರು, ಪಿಂಚಣಿ ಗಳ ವಿಲೇವಾರಿ ಅವಧಿ ಸದ್ಯ 45 ದಿನ ಇದೆ. ಇದನ್ನು 30 ದಿನಕ್ಕೆ ಇಳಿಸಲಾಗುವುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ನನ್ನಲ್ಲಿರುವ ಮಾಹಿತಿ ಬಹಿರಂಗವಾದ್ರೆ ಸರ್ಕಾರದ ಬುಡವೇ ಅಲ್ಲಾಡುತ್ತೆ : ವಸತಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಶಾಸಕ ಬಿ.ಆರ್‌.ಪಾಟೀಲ ಆಡಿಯೋ ವೈರಲ್..!

ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕಾನೂನು ಪ್ರಕಾರವೇ ಉದಾರತನದಿಂದ ವರ್ತಿಸಿ ಪರಿಹಾರ ನೀಡಿ ಎನ್ನುವ ಸೂಚನೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಿಎಂ ನೀಡಿ, ಸಣ್ಣ ಪುಟ್ಟ ತಾಂತ್ರಿಕ ಕಾರಣಗಳಿಗಾಗಿ ರೈತರ ಆತ್ಮಹತ್ಯೆ ಪರಿಹಾರದ ಅರ್ಜಿಗಳನ್ನು ತಿರಸ್ಕರಿಸದೆ ಸ್ವಲ್ಪ ಉದಾರವಾಗಿ, ರೈತ ಕುಟುಂಬಗಳಿಗೆ ಸಹಾಯ ಮಾಡಿ ಎಂದರು.
ರಾಜ್ಯದಲ್ಲಿ 2225 ಗ್ರಾಮಗಳು ಮತ್ತು 2038334 ಜನರು ಪ್ರವಾಹ, ಭೂ ಕುಸಿತಕ್ಕೆ ಪ್ರತೀ ವರ್ಷ ತುತ್ತಾಗುತ್ತಾರೆ. ರಾಜ್ಯದಲ್ಲಿ ಪ್ರಸ್ತುತ ಮುಂಗಾರು ಅವಧಿಯಲ್ಲಿ ಇದುವರೆಗೆ ಶೇ.7ರಷ್ಟು ಹೆಚ್ಚು ಮಳೆಯಾಗಿದೆ. ಈ ವರ್ಷ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅತಿವೃಷ್ಟಿಯಿಂದ ಸಮಸ್ಯೆಯಾಗುವ 27 ಜಿಲ್ಲೆ 177 ತಾಲೂಕುಗಳು, 1247 ಗ್ರಾಮ ಪಂಚಾಯತ್‌ಗಳಲ್ಲಿ ಅತಿವೃಷ್ಟಿಗೆ ತುತ್ತಾಗುವುದನ್ನು ಗುರುತಿಸಲಾಗಿದ್ದು, ಪ್ರತಿ ಕಡೆ ಟಾಸ್ಕ್‌ಪೋರ್ಸ್‌ ರಚಿಸಬೇಕು. 20,38,334 ಜನರು ಪದೇ ಪದೇ ಪ್ರವಾಹಕ್ಕೆ ತುತ್ತಾಗುವುದನ್ನು ಗುರುತಿಸಲಾಗಿದೆ. ಅಂತಹ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಮನೆ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement