ಕರ್ನಾಟಕದಲ್ಲಿ ಡೆಂಗೆ ಹೆಚ್ಚಳ : ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಿಕೊಂಡ ಹೈಕೋರ್ಟ್‌

ಬೆಂಗಳೂರು : ರಾಜಧಾನಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಡೆಂಗೆ ಜ್ವರ ಪ್ರಕರಣಗಳ ಹೆಚ್ವಳವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಬುಧವಾರ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ರಿಜಿಸ್ಟ್ರಾರ್‌ ಜನರಲ್‌ಗೆ ಆದೇಶಿಸಿದೆ.
ಕಲಾಪ ಪ್ರಾರಂಭವಾಗುತ್ತಿದ್ದ ಮುಖ್ಯನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ ನೇತೃತ್ವದ ವಿಭಾಗೀಯ ಪೀಠವು ವಿಷಯ ಪ್ರಸ್ತಾಪಿಸಿತು. ಡೆಂಗೆ ಜ್ವರದ ಹೆಚ್ಚಳ ಸಂಬಂಧ ರಾಜ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕಾದ ಅಗತ್ಯವಿದೆ ಎಂದು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದಕ್ಕೆ ರಾಯಚೂರಿನ ವ್ಯಕ್ತಿಯೊಬ್ಬರು ಓದುಗರ ವಿಭಾಗಕ್ಕೆ ಬರೆದ ಪತ್ರವನ್ನು ಆಧರಿಸಿ ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಲು ಆದೇಶಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿ ಮಾಡಿ ಜುಲೈ 23ರೊಳಗೆ ಡೆಂಗೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ರಿಜಿಸ್ಟ್ರಾರ್ ಜನರಲ್ ಅವರು ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಸರ್ಕಾರದ ಸಂಬಂಧಿತ ಪ್ರಾಧಿಕಾರಗಳಿಗೆ ಅರ್ಜಿ ರವಾನೆ ಆಗುವವರೆಗೆ ಕಾಯಬಾರದು. ತಕ್ಷಣ ಕಾರ್ಯಪ್ರವೃತ್ತಗೊಂಡು ತಕ್ಷಣವೇ ನೋಟಿಸ್ ತಲುಪುವಂತೆ ನೋಡಿಕೊಳ್ಳಬೇಕು ಎಂದರು. ಸರ್ಕಾರದ ಪರವಾಗಿ ನೋಟಿಸ್‌ ಪಡೆಯುವುದಾಗಿ ಸರ್ಕಾರದ ವಕೀಲ ಎಸ್‌ ಎಸ್‌ ಮಹೇಂದ್ರ ಹೇಳಿದರು.
ಈ ವೇಳೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದ ಅಡ್ವೋಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ ಅವರು ನ್ಯಾಯಾಲಯದ ಆದೇಶವನ್ನು ತಕ್ಷಣ ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ವಿಚಾರಣೆ ವೇಳೆಗೆ ಅನುಪಾಲನಾ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನ್ಯಾಯಾಲಯವು ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿತು.

ಪ್ರಮುಖ ಸುದ್ದಿ :-   ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ-ನತಾಶಾ 4 ವರ್ಷಗಳ ದಾಂಪತ್ಯ ಅಂತ್ಯ ; ವಿಚ್ಛೇದನ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement