ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಈಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಂಕರ ದತ್ತಾ ಅವರಿದ್ದ ಪೀಠವು ಕೇಜ್ರಿವಾಲ್ ಅವರ ಬಂಧನ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯಲ್ಲಿ ಎತ್ತಿರುವ ಕೆಲವು ಕಾನೂನು ಪ್ರಶ್ನೆಗಳನ್ನು ಉನ್ನತ ನ್ಯಾಯಾಲಯದ ದೊಡ್ಡ ಪೀಠವು ಪರಿಗಣಿಸುವ ಅಗತ್ಯವಿದೆ ಎಂದು ಹೇಳಿದೆ. ಆದ್ದರಿಂದ, ಇದನ್ನು ದೊಡ್ಡ ಪೀಠಕ್ಕೆ ಉಲ್ಲೇಖಿಸುವಾಗ, ಕೇಜ್ರಿವಾಲ್ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸೂಕ್ತವೆಂದು ಕೋರ್ಟ್ ಪರಿಗಣಿಸಿದೆ. “ವಿಷಯವನ್ನು ದೊಡ್ಡ ಪೀಠಕ್ಕೆ ಉಲ್ಲೇಖಿಸಿರುವುದರಿಂದ, ಮಧ್ಯಂತರ ಜಾಮೀನಿನ ಮೇಲೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ” ಎಂದು ನ್ಯಾಯಾಲಯ ಆದೇಶಿಸಿದೆ.
ಆದಾಗ್ಯೂ, ಇಡಿ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ, ಕೇಜ್ರಿವಾಲ್ ಅವರು ಕೇಂದ್ರೀಯ ತನಿಖಾ ದಳ (ಸಿಬಿಐ)ದ ಪ್ರಕರಣದಲ್ಲಿ ಬಂಧನದಲ್ಲಿರುವುದರಿಂದ ಜೈಲಿನಲ್ಲೇ ಉಳಿಯಲಿದ್ದಾರೆ.
ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ಅನುಕೂಲವಾಗುವಂತೆ ಪೀಠವು ಈ ಹಿಂದೆ ಕೇಜ್ರಿವಾಲ್ಗೆ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಜಾಮೀನು ಅವಧಿ ಮುಗಿದ ನಂತರ ದೆಹಲಿ ಮುಖ್ಯಮಂತ್ರಿ ಜೈಲಿಗೆ ಮರಳಿದ್ದರು.
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು.
ದೆಹಲಿ ಹೈಕೋರ್ಟ್ ಈ ಹಿಂದೆ ಕೇಜ್ರಿವಾಲ್ ಅವರ ಬಂಧನದ ವಿರುದ್ಧದ ಮನವಿಯನ್ನು ತಿರಸ್ಕರಿಸಿತ್ತು, ಇದರ ವಿರುದ್ಧದ ಅವರು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಏತನ್ಮಧ್ಯೆ, ಕೇಜ್ರಿವಾಲ್ ಪ್ರತ್ಯೇಕವಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು ಮತ್ತು ವಿಚಾರಣಾ ನ್ಯಾಯಾಲಯವು ಜೂನ್ 20 ರಂದು ಅವರಿಗೆ ಜಾಮೀನು ಮಂಜೂರು ಮಾಡಿತು ಮತ್ತು ₹ 1 ಲಕ್ಷ ಜಾಮೀನು ಬಾಂಡ್ಗೆ ಒಳಪಟ್ಟು ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಆದರೆ, ಈ ಆದೇಶಕ್ಕೆ ದೆಹಲಿ ಹೈಕೋರ್ಟ್ ಜೂನ್ 25ರಂದು ತಡೆ ನೀಡಿತ್ತು.
ಕೇಜ್ರಿವಾಲ್ ಆರಂಭದಲ್ಲಿ ಇದರ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು ಆದರೆ ನಂತರ ಹೊಸ ಮೇಲ್ಮನವಿ ಸಲ್ಲಿಸುವ ಸಲುವಾಗಿ ಅದನ್ನು ಹಿಂಪಡೆಯಲು ನಿರ್ಧರಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ