ಲಂಡನ್: ಅಂತಿಮ ಸರ್ವ್‌ನಲ್ಲಿ ಅದ್ಭುತ ವಿಂಬಲ್ಡನ್ ಗೆಲುವಿನ ಮುದ್ರೆಯೊತ್ತಿದ ಬಾರ್ಬೊರಾ ಕ್ರೆಜ್‌ಸಿಕೋವಾ ತಮ್ಮ ಮೊದಲ ವಿಂಬಲ್ಡನ್ ಗ್ರ್ಯಾಂಡ್ ಸ್ಯ್ಲಾಮ್ ಪ್ರಶಸ್ತಿಗೆ ಭಾಜನರಾದರು.
ಕ್ರೆಜ್‌ಸಿಕೋವಾ ತಮ್ಮ ಎದುರಾಳಿ ಜಾಸ್ಮಿನ್ ಪಾವೊಲಿನಿ ಅವರನ್ನು 6-2, 2-6, 6-4 ಸೆಟ್‌ಗಳಿಂದ ಸೋಲಿಸಿ ತನ್ನ ಚೊಚ್ಚಲ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. 2021 ರ ರೋಲ್ಯಾಂಡ್ ಗ್ಯಾರೋಸ್ ನಲ್ಲಿ ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿ ಮತ್ತು ಡಬಲ್ಸ್ ಚಾಂಪಿಯನ್ ಗೆದ್ದಿರುವ ಕ್ರೆಜ್ಸಿಕೋವಾ ಅವರಿಗೆ ಕಳೆದ ಮೂರು ವರ್ಷಗಳಲ್ಲಿ ಇದು ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಯಾಗಿದೆ. ಕ್ರೆಜ್ಸಿಕೋವಾ ಅವರು ಓಪನ್ ಎರಾದಲ್ಲಿ ವಿಂಬಲ್ಡನ್‌ನಲ್ಲಿ ಮಹಿಳಾ ಪ್ರಶಸ್ತಿಯನ್ನು ಗೆದ್ದ ಜೆಕ್ ಗಣರಾಜ್ಯದ ನಾಲ್ಕನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಅವರಿಗಿಂತ ಮೊದಲು, ಯಾನಾ ನೊವೊಟ್ನಾ, ಪೆಟ್ರಾ ಕ್ವಿಟೋವಾ ಮತ್ತು ಕಳೆದ ವರ್ಷದ ಚಾಂಪಿಯನ್ ಮಾರ್ಕೆಟಾ ವೊಂಡ್ರೊಸೊವಾ ಈ ಪ್ರಶಸ್ತಿಯನ್ನು ಗೆದ್ದಿದ್ದರು. 28 ನೇ ವಯಸ್ಸಿನಲ್ಲಿ, ಕ್ರೆಜ್ಸಿಕೋವಾ ಆರು ವರ್ಷಗಳ ಹಿಂದೆ ಏಂಜೆಲಿಕ್ ಕೆರ್ಬರ್ ನಂತರ ತನ್ನ ಮೊದಲ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ಆಟಗಾರ್ತಿ ಎನಸಿದ್ದಾರೆ. ಕ್ರೆಜ್ಸಿಕೋವಾ ಈಗ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ.
“ಇದು ಖಂಡಿತವಾಗಿಯೂ ನನ್ನ ಟೆನಿಸ್ ವೃತ್ತಿಜೀವನದ ಅತ್ಯುತ್ತಮ ದಿನ ಮತ್ತು ನನ್ನ ಜೀವನದ ಅತ್ಯುತ್ತಮ ದಿನ” ಎಂದು ವಿಂಬಲ್ಡನ್ ಗೆದ್ದ ಕ್ರೆಜ್ಸಿಕೋವಾ ಹೇಳಿದರು. “ನಾನು ಇದೀಗ ಏನನ್ನು ಅನುಭವಿಸುತ್ತಿದ್ದೇನೆ ಎಂಬುದನ್ನು ವಿವರಿಸಲು ತುಂಬಾ ಕಷ್ಟ ಎಂದು ಹೇಳಿದರು.
ಮೊದಲ ಗ್ರ್ಯಾಂಡ್ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಇಟಾಲಿಯನ್ ಎಂಬ ದಾಖಲೆ ನಿರ್ಮಿಸುವಲ್ಲಿ ಪಾವೊಲಿನಿ ಕೊನೆ ಕ್ಷಣದಲ್ಲಿ ಎಡವಿದರು. ಈ ವರ್ಷದ ಆರಂಭದಲ್ಲಿ, ಫ್ರೆಂಚ್ ಓಪನ್ ಫೈನಲ್‌ನಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ಇಗಾ ಸ್ವಿಯಾಟೆಕ್ ವಿರುದ್ಧ ಸೋತಿದ್ದ ಪಾವೊಲಿನಿ ಇಲ್ಲಿಯೂ ಫೈನಲ್‌ನಲ್ಲಿ ಸೋತಿದ್ದಾರೆ.
ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ಕ್ರೆಜ್ಸಿಕೋವಾ ವಿರುದ್ಧ ಕಠಿಣ ಹೋರಾಟ ನೀಡಿದ ಪಾವೊಲಿನಿ ವಿಂಬಲ್ಡನ್ ಫೈನಲ್ ತಲುಪಿದ ಮೊದಲ ಇಟಾಲಿಯನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನಿಮ್ಮ ಕಾಮೆಂಟ್ ಬರೆಯಿರಿ