ನವದೆಹಲಿ: ಜಗನ್ನಾಥ ದೇವರ ದೈವಿಕ ಕೃಪೆಯಿಂದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಹೇಳಿದೆ.
“ಇದು ದೈವಿಕ ಹಸ್ತಕ್ಷೇಪವಾಗಿದೆ. ಸರಿಯಾಗಿ 48 ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಜಗನ್ನಾಥ ರಥಯಾತ್ರೆ ಉತ್ಸವ ನಡೆಯಲು ಸಹಾಯ ಮಾಡಿದ್ದರು. ಇಂದು ಜಗತ್ತು 9 ದಿನಗಳ ಜಗನ್ನಾಥ ರಥಯಾತ್ರೆಯ ಉತ್ಸವವನ್ನು ಆಚರಿಸುತ್ತಿರುವಾಗ , ಟ್ರಂಪ್ ದಾಳಿಗೆ ಒಳಗಾಗಿದ್ದಾರೆ ಮತ್ತು ಜಗನ್ನಾಥ ಅವರನ್ನು ರಕ್ಷಿಸುವ ಮೂಲಕ ಕೃಪೆ ತೋರಿದ್ದಾನೆ ”ಎಂದು ಇಸ್ಕಾನ್ ಉಪಾಧ್ಯಕ್ಷ ಹಾಗೂ ವಕ್ತಾರ ರಾಧಾರಮಣ ದಾಸ್ ಹೇಳಿದ್ದಾರೆ.
1976ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಜಗನ್ನಾಥ ದೇವರ ಮೊದಲ ರಥಯಾತ್ರೆ ಸಂದರ್ಭದಲ್ಲಿ ಮೆರವಣಿಗೆಗೆ ಅನುಮತಿ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು ಎಂದು ಹೇಳಿರುವ ದಾಸ್, ರಥಯಾತ್ರೆಗೆ ಟ್ರಂಪ್ ಅವರು ಮಾಡಿದ್ದ ಸಹಾಯದ ಕುರಿತು ಪೋಸ್ಟ್‌ನಲ್ಲಿ ನೆನಪಿಸಿಕೊಂಡಿದ್ದಾರೆ. ‘ ಟ್ರಂಪ್‌ಗೆ ದೇವರು ಒಳಿತು ಮಾಡಲಿ’ ಎಂದು ಅವರು ಆಶಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗಿರುವ ಟ್ರಂಪ್ ಅವರ ಮೇಲೆ ಪೆನ್ಸಿಲ್ವೇನಿಯಾದಲ್ಲಿ ಶನಿವಾರ ಸಂಜೆ ದಾಳಿ ನಡೆದಿತ್ತು. ಸಮಾವೇಶದಲ್ಲಿ ಮಾತನಾಡುತ್ತಿದ್ದ ಟ್ರಂಪ್ ಅವರತ್ತ ಹಲವು ಬಾರಿ ಗುಂಡು ಹಾರಿಸಲಾಗಿತ್ತು. ಈ ವೇಳೆ ಟ್ರಂಪ್ ಅವರ ಕಿವಿಗೆ ಗಾಯವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆಯಲ್ಲಿ ಓರ್ವ ಸಾವಿಗೀಡಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ