ನವದೆಹಲಿ: ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಎಸ್.ಸಿ. ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.
ಇಂದು, ಸೋಮವಾರ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ಕೊನೆಯಲ್ಲಿ, ಅರ್ಜಿ ವಜಾಗೊಳಿಸಲಾಗಿದೆ ಎಂದು ಹೇಳಿದೆ. ಈ ಮೂಲಕ ಡಿ ಕೆ ಶಿವಕುಮಾರ ಅವರಿಗೆ ಹಿನ್ನಡೆಯಾಗಿದೆ.
ಕಳೆದ ವರ್ಷ ಅಕ್ಟೋಬರ್ 19, 2023ರಲ್ಲಿ ಹೈಕೋರ್ಟ್ ಮನವಿಯನ್ನು ತಿರಸ್ಕರಿಸಿದ್ದರ ವಿರುದ್ಧ ಡಿ ಕೆ ಶಿವಕುಮಾರ್ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು
ಏನಿದು ಪ್ರಕರಣ?: ಡಿಕೆ ಶಿವಕುಮಾರ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾಗ, 2013 ರ ಏಪ್ರಿಲ್ 1 ರಿಂದ 2018 ರ ಏಪ್ರಿಲ್ 30 ಅವಧಿಯಲ್ಲಿ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.
2017 ರಲ್ಲಿ ಶಿವಕುಮಾರ ಮನೆ ಮತ್ತು ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಶೋಧ ಕಾರ್ಯಾಚರಣೆಗಳ ಆಧಾರದ ಮೇಲೆ, ಜಾರಿ ನಿರ್ದೇಶನಾಲಯ ಕೂಡ ಡಿಕೆ ಶಿವಕುಮಾರ ವಿರುದ್ಧ ತನಿಖೆಯನ್ನು ಪ್ರಾರಂಭಿಸಿತ್ತು. ಇ.ಡಿ ತನಿಖೆಯ ಆಧಾರದ ಮೇಲೆ ಸಿಬಿಐ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರದಿಂದ ಅನುಮತಿ ಕೋರಿತ್ತು. ರಾಜ್ಯ ಸರ್ಕಾರವು 2019 ರ ಸೆಪ್ಟೆಂಬರ್ 25 ರಂದು ಅನುಮತಿ ನೀಡಿತ್ತು. ಅದರಂತೆ, ಡಿಕೆ ಶಿವಕುಮಾರ ವಿರುದ್ಧ ಸಿಬಿಐ 2020 ರ ಅಕ್ಟೋಬರ್ 3 ರಂದು ಎಫ್ಐಆರ್ ದಾಖಲಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ