ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿರುವ ಪರ್ಯಾಯ ಪ್ಲಾಟ್ ಹಗರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿರುವ ರಾಜ್ಯ ಸರ್ಕಾರ ಈ ಸಂಬಂಧ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗ ರಚನೆ ಮಾಡಿದೆ.
ಮುಡಾ ಸೈಟ್ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ರಾಜ್ಯಾದ್ಯಂತ ಬಾರೀ ಚರ್ಚೆಗೆ ಗ್ರಾಸವಾಗಿದೆ. ಇಂದಿನಿಂದ (ಜುಲೈ ೧೫) ಆರಂಭವಾಗುತ್ತಿರುವ ವಿಧಾನ ಮಂಡಳ ಅಧಿವೇಶನದಲ್ಲಿ ಈ ಪ್ರಕರಣವನ್ನು ಪ್ರಮುಖವಾಗಿ ಚರ್ಚೆ ಕೈಗೆತ್ತಿಕೊಂಡು ಸರ್ಕಾರದ ವಿರುದ್ಧ ಮುಗಿಬೀಳು ವಿಪಕ್ಷಗಳು ಸಜ್ಜಾಗಿವೆ.ಹೀಗಾಗಿ ರಾಜ್ಯ ಸರ್ಕಾರ ಮುಡಾ ಅಕ್ರಮದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ಆದೇಶ ಹೊರಡಿಸಿದ್ದು, 6 ತಿಂಗಳೊಳಗೆ ವರದಿ ನೀಡುವಂತೆ ವಿಚಾರಣಾ ಆಯೋಗಕ್ಕೆ ಸೂಚನೆ ನೀಡಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಷಯದಲ್ಲಿ ಆರೋಪಗಳು ಸರ್ಕಾರದ ಗಮನಕ್ಕೆ ಬಂದಿರುವುದಲ್ಲದೆ, ಮಾಧ್ಯಮಗಳಲ್ಲಿಯೂ ಸಹ ವರದಿಯಾಗಿರುತ್ತದೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು, Commission of Inquiry Act, 1952ರ ನಿಯಮ 3 ರ ಉಪನಿಯಮ (1) ರನ್ವಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ವಿಚಾರಣಾ ಆಯೋಗವನ್ನು ರಚಿಸಲು ಸರ್ಕಾರವು ತೀರ್ಮಾನಿಸಿದೆ.
ಹೀಗಾಗಿ ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ತನಿಖೆಗೆ ಸಹಕರಿಸಲು ಸೂಚಿಸಿ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ