ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌ ; 7ನೇ ವೇತನ ಆಯೋಗದ ಶಿಫಾರಸು ಜಾರಿ : ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. 7ನೇ ವೇತನ ಆಯೋಗದ (7th Pay Commission) ವೇತನ ಪರಿಷ್ಕರಣೆಯನ್ನು ಆಗಸ್ಟ್‌ 1 ರಿಂದಲೇ ಅನ್ವಯವಾಗುವಂತೆ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ , ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಏಳನೇ ವೇತನ ಆಯೋಗ ರಚನೆ ಮಾಡಲಾಗಿತ್ತು. ಏಳನೇ ವೇತನ ಆಯೋಗವು ಸರ್ಕಾರಕ್ಕೆ ವರದಿ ನೀಡಿದೆ. ಆಗಸ್ಟ್‌ 1 ರಿಂದ ಅನ್ವಯ ಆಗುವಂತೆ ವೇತನ ಪರಿಷ್ಕರಣೆ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆ, ಪಿಂಚಣಿಯನ್ನು ದಿನಾಂಕ: 01.07.2022ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ ದಿನಾಂಕ: 01.08.2024ರಿಂದ ಅನುಷ್ಠಾನಗೊಳಿಸಲು ಜುಲೈ 15ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ” ಎಂದು ತಿಳಿಸಿದ್ದಾರೆ.

ಶೇ.31ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. 27.5% ವೇತನ ಹೆಚ್ಚಳ ಮಾಡಲಾಗುತ್ತದೆ. ಇದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ.58.50 ರಷ್ಟು ಹೆಚ್ಚಳವಾಗುತ್ತದೆ. ಮನೆಬಾಡಿಗೆ ಭತ್ಯೆಯಲ್ಲಿ ಶೇ. 32ರಷ್ಟು ಹೆಚ್ಚಳವಾಗುತ್ತದೆ.ಮೂಲವೇತನ 17 ಸಾವಿರದಿಂದ 27 ಸಾವಿರ ವರೆಗೆ ಹೆಚ್ಚಳವಾಗಲಿದೆ. ಗರಿಷ್ಠ 1,50,600 ದಿಂದ 2,43,000 ವರೆಗೂ ವೇತನ ಹೆಚ್ಚಳವಾಗಲಿದೆ. ಪಿಂಚಣಿ ಕನಿಷ್ಠ 8 ಸಾವಿರದಿಂದ 13 ಸಾವಿರಕ್ಕೆ ಹೆಚ್ಚಾಗಲಿದೆ. ಗರಿಷ್ಠ ಪಿಂಚಣಿ 75,300 ರೂ. ನಿಂದ 1,20,600 ವರೆಗೂ ಹೆಚ್ಚಳವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರಿ ನೌಕರರ ವೇತನ ಹೆಚ್ಚಳದಿಂದ ವಾರ್ಷಿಕವಾಗಿ 20,208 ಕೋಟಿ ಹೆಚ್ಚುವರಿ ವೆಚ್ಚ ಆಗಲಿದೆ ಎಂದು ಸಿಎಂ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement