ಶಿರಾಡಿ ಘಾಟ್ ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕುಸಿದು ಬಿದ್ದ ಗುಡ್ಡ

ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ದೊಡ್ಡತಪ್ಪಲು ಎಂಬಲ್ಲಿ ಭೂ ಕುಸಿತ ಉಂಟಾಗಿ ಮಾರುತಿ ಒಮ್ನಿ ಮೇಲೆ ಗುಡ್ಡ ಕುಸಿದು ಬಿದ್ದು ಜಖಂಗೊಂಡಿದ್ದು, ವಾಹನಲ್ಲಿದ್ದವರು ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆ ಗುರುವಾರ ( ಜು.18) ನಸುಕಿನ ಜಾವ 3ರ ಸುಮಾರಿಗೆ ಸಂಭವಿಸಿದೆ ಎನ್ನಲಾಗಿದ್ದು, ದೊಡ್ಡತಪ್ಪಲು ಸಮೀಪ ಭೂ ಕುಸಿತ ಉಂಟಾಗಿ ಕಾರಿನ ಮೇಲೆ ಬಿದ್ದಿದ್ದು ಕಾರು ಮಣ್ಣಿನ ರಾಶಿಯಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಅಲ್ಲೇ ಇದ್ದ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಕಂಪನಿಯ ಬಿಹಾರ ಮೂಲದ ಕಾರ್ಮಿಕ ವಾಹನದಲ್ಲಿದ್ದ ಶರತ್ ಹಾಗೂ ಅಖಿಲೇಶ ಅವರನ್ನು ವಾಹನದಿಂದ ಹೊರಕ್ಕೆ ತಂದು ಅವರ ಪ್ರಾಣ ಉಳಿಸಿದ್ದಾರೆ.
ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಕಡೆಯಿಂದ ಸಕಲೇಶಪುರ ಮಾರ್ಗವಾಗಿ ಬರುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಭೂ ಕುಸಿತದಿಂದ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಘಟನೆ ನಡೆದ ಸ್ಥಳದಿಂದ ಎರಡೂ ಕಡೆಗೆ 5-5 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿದ್ದು, ಮಣ್ಣು ತೆರವು ಗೊಳಿಸುವ ಕಾರ್ಯ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement