ಹಾವೇರಿ: ನಿರಂತರ ಮಳೆ ಹಿನ್ನೆಲೆ ಮನೆಯ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕೆಲ ದಿನಗಳಿಂದ ಸುರಿದ ಮಳೆಗೆ ಮನೆ ಸೋರುತ್ತಿದ್ದು, ಶುಕ್ರವಾರ ಬೆಳಗ್ಗೆ ಗೋಡೆ ಕುಸಿದಿದೆ. ಒಂದೇ ಕೋಣೆಯಲ್ಲಿ ಮಲಗಿದ್ದ ಚೆನ್ನಮ್ಮ ಹರಕುಣಿ (30) ಹಾಗೂ ಆಕೆಯ ಅವಳಿ ಹೆಣ್ಣು ಮಕ್ಕಳಾದ ಅಮೂಲ್ಯ ಮತ್ತು ಅನನ್ಯ (2) ಮೃತಪಟ್ಟಿದ್ದಾರೆ. ರಾತ್ರಿ ಮನೆಯೊಳಗೆ ಮಲಗಿದ್ದ ವೇಳೆಯಲ್ಲಿ ಇದ್ದಕ್ಕಿದ್ದಂತೆ ಮನೆ ಕುಸಿದಿದೆ. ಇನ್ನು ಮೂವರಿಗೆ ಗಾಯಗಳಾಗಿದ್ದು ಸವಣೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಯಲ್ಲಮ್ಮ (70) ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ಕೃಷಿ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬ ಮಾದಾಪುರ ಗ್ರಾಮದಲ್ಲಿ ಸಣ್ಣ ಹಿಡುವಳಿ ಭೂಮಿ ಹೊಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ