ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿದ ಹೈಕೋರ್ಟ್‌

ಬೆಂಗಳೂರು : ಹಿರಿಯ ಸಾಹಿತಿ ಹಾಗೂ ಸಂಶೋಧಕ ಎಂ. ಎಂ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ವಾಸುದೇವ ಭಗವಾನ್‌ ಮತ್ತು ಅಮಿತ್‌ ಬದ್ದಿಗೆ ಹೈಕೋರ್ಟ್‌ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ವಾಸುದೇವ ಭಗವಾನ್‌ ಸೂರ್ಯವಂಶಿ ಮತ್ತು ಅಮಿತ್‌ ಬದ್ದಿ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ಜಾಮೀನು ನೀಡಿ ಆದೇಶಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ ಶ್ಯಾಮ “ಎರಡೂ ಹತ್ಯೆ ಪ್ರಕರಣಗಳಲ್ಲಿ ಅರ್ಜಿದಾರರ ವಿರುದ್ಧ ಬೈಕ್‌ ಕಳವು ಮಾಡಿ ಅದನ್ನು ಹತ್ಯೆಯ ಕೃತ್ಯಕ್ಕೆ ಬಳಸಿದವರಿಗೆ ನೀಡಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಆದರೆ, ಇವರ ವಿರುದ್ಧದ ಬೈಕ್‌ ಕಳವು ಪ್ರಕರಣ ಈಗಾಗಲೇ ಇತ್ಯರ್ಥವಾಗಿದೆ” ಎಂದು ಪೀಠಕ್ಕೆ ತಿಳಿಸಿದರು.
“ಕಳೆದ ಆರೂವರೆ ವರ್ಷಗಳಿಂದ ಈ ಅರ್ಜಿದಾರರ ವಿಚಾರಣೆ ನಡೆದಿಲ್ಲ. ಒಟ್ಟು 138 ಸಾಕ್ಷಿಗಳಲ್ಲಿ ಈತನಕ ಕೇವಲ 10 ಸಾಕ್ಷಿಗಳನ್ನು ಮಾತ್ರವೇ ವಿಚಾರಣೆ ನಡೆಸಲಾಗಿದ್ದು ಸಾಕಷ್ಟು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ಪೀಠ ಜಾಮೀನು ಮಂಜೂರು ಮಾಡಿತು. ಪ್ರಾಸಿಕ್ಯೂಷನ್‌ ಪರ ಅಶೋಕ ನಾಯಕ್‌ ವಾದ ಮಂಡಿಸಿದರು.

ಪ್ರಮುಖ ಸುದ್ದಿ :-   ಆರ್‌ಜಿ ಕರ್ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ : ಸಾಕ್ಷ್ಯ ನಾಶ ಆರೋಪ ಹೊತ್ತ ಪಾಣಿಹಟಿ ಪುರಸಭೆ ಮಾಜಿ ಅಧ್ಯಕ್ಷ ಬೆಂಗಳೂರಲ್ಲಿ ಬಂಧನ

ಪ್ರಕರಣದ ಹಿನ್ನೆಲೆ: 2015ರ ಆಗಸ್ಟ್‌ 30ರ ಬೆಳಿಗ್ಗೆ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಧಾರವಾಡದ ತಮ್ಮ ನಿವಾಸದಲ್ಲಿದ್ದ ಎಂ ಎಂ ಕಲಬುರ್ಗಿ ಅವರ ಹಣೆಯ ಭಾಗಕ್ಕೆ ಬಂದೂಕಿನಿಂದ ಶೂಟ್‌ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಲಬುರ್ಗಿ ಅವರು ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಅಸುನೀಗಿದ್ದರು.
ಆರೋಪಿಗಳ ವಿರುದ್ಧ ಧಾರವಾಡದ ವಿದ್ಯಾಗಿರಿಯ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 120ಬಿ, 109, 449, 302, 201 ಮತ್ತು 35 ಜೊತೆಗೆ ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ಗಳಾದ 25(1)(ಎ), 25(1)ಬಿ, 27(1) ಅಡಿ ಪ್ರಕರಣ ದಾಖಲಾಗಿದ್ದು, ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement