ಕರ್ನಾಟಕದ 6 ಜಿಲ್ಲೆಗಳಲ್ಲಿ ಭಾರಿ ಗಾಳಿ ಮಳೆ ಮುನ್ಸೂಚನೆ ; ಎರಡು ದಿನ ‘ಆರೆಂಜ್ ಅಲರ್ಟ್‌’ ಘೋಷಣೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಕ್ರವಾರವೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜುಲೈ 27ರ ವರೆಗೆ ಆರೇಂಜ್‌ ಅಲರ್ಟ್‌ ನೀಡಲಾಗಿದೆ. ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಗಳಿಗೂ ಜುಲೈ 26 ಹಾಗೂ 27ರಂದು ಆರೇಂಜ್‌ ಅಲರ್ಟ್‌ ನೀಡಲಾಗಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ವಿಜಯಪುರ, ಕಲಬುರಗಿ, ಬೀದರ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಗಾಳಿಯು 40 ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಉದ್ದಕ್ಕೂ ಬಿರುಗಾಳಿಯಿಂದ ಕೂಡಿದ ಹವಾಮಾನ ಇರಲಿದೆ. ಗಂಟೆಗೆ 35 ಕಿ.ಮೀ.ದಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗವು 40 ಕಿ.ಮೀ ನಿಂದ 50 ಕಿ.ಮೀ. ತಲುಪುವ ಸಂಭವವಿದೆ ಎಂದು ತಿಳಿಸಿದೆ.
ಗುರುವಾರ ಬೆಳಿಗ್ಗೆ 8:30ಕ್ಕೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ (18 ಸೆಂ.ಮೀ), ಉಡುಪಿ ಜಿಲ್ಲೆಯ ಸಿದ್ದಾಪುರ (17 ಸೆಂ.ಮೀ), ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿ (14 ಸೆಂ.ಮೀ), ಕೊಟ್ಟಿಗೆಹಾರದಲ್ಲಿ (13 ಸೆಂ.ಮೀ) ಹೆಚ್ಚು ಮಳೆ ದಾಖಲಾಗಿದೆ. ಆಗುಂಬೆ, ಸೋಮವಾರಪೇಟೆ, ಭಾಗಮಂಡಲ, ಕಳಸ, ಸಿದ್ದಾಪುರದಲ್ಲಿ ತಲಾ 11 ಸೆಂ.ಮೀ. ಮಳೆ ಸುರಿದಿದೆ. ಕೊಲ್ಲೂರು 10, ಯಲ್ಲಾಪುರ, ಗೇರುಸೊಪ್ಪ ತಲಾ 9, ಧರ್ಮಸ್ಥಳ, ಲೋಂಡಾ, ಕೊಪ್ಪದಲ್ಲಿ ತಲಾ 8 ಸೆಂ.ಮೀ. ಮಳೆಯಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement