ಶಿರೂರು ಗುಡ್ಡ ಕುಸಿತ | ನದಿಯಲ್ಲಿ ಟ್ರಕ್ ಇರುವಿಕೆ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ತಜ್ಞ ಕಂಪನಿ; ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಆಗಮನ

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರುಬಳಿ ಗುಡ್ಡ ಕುಸಿತದ ದುರಂತದಲ್ಲಿ ಗಂಗಾವಳಿ ನದಿ ನೀರಿನಲ್ಲಿ ಮಣ್ಣಿನ ಅಡಿ ಸಿಲುಕಿರುವ ಕೇರಳದ ಲಾರಿ, ಮತ್ತಿತರ ವಾಹನಗಳು ಮತ್ತು ನಾಪತ್ತೆಯಾದವರ ಮೂವರ ಪತ್ತೆಗೆ ನದಿ ನೀರಿನಲ್ಲಿ ಶೋಧ ಕಾರ್ಯಾಚರಣೆ 12 ನೇ ದಿನವೂ ಮುಂದುವರಿದಿದೆ. ಪತ್ತೆಗಾಗಿ ದೆಹಲಿಯ ಕ್ವಿಕ್‌ಪೇ ಪ್ರೈವೇಟ್ ಲಿಮಿಟೆಡ್‌ ನಡೆಸಿದ ದ್ರೋಣ್‌ ಕಾರ್ಯಾಚರಣೆಯ ವರದಿಯನ್ನು ಶನಿವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ವರದಿಯನ್ನು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಗೆ ಸಲ್ಲಿಸಿದೆ. ಇದರ ಬೆನ್ನಿಗೇ ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಸ್ಥಳಕ್ಕೆ ಆಗಮಿಸಿದ್ದು, ಶೋಧ ಕಾರ್ಯಕ್ಕೆ ತಯಾರಿ ನಡೆಸಿದೆ. ಈಶ್ವರ ಮಲ್ಪೆ ಮತ್ತು 8 ಜನ ಜೊತೆಗಾರರ ಮುಳುಗು ತಜ್ಞರ ತಂಡ ಶಿರೂರಿನಲ್ಲಿ ಪರಿಶೀಲನೆ ನಡೆಸುತ್ತಿದ್ದು ನೌಕಾನೆಲೆ ತಜ್ಞರು, ಎನ್. ಡಿ.ಆರ್. ಎಫ್ ಮಾರ್ಗದರ್ಶನದಲ್ಲಿ ಶೋಧ ಕಾರ್ಯಾಚರಣೆಗೆ ಇಳಿಯಲಿದ್ದಾರೆ. ನೌಕಾಪಡೆಯ ಟಗ್ ಯಂತ್ರವನ್ನು ಕಾರ್ಯಾಚರಣೆಗೆ ಬಳಸಿಕೊಳ್ಳುವ ಸಾಧ್ಯತೆಗಳಿದ್ದು ಸ್ಥಳೀಯ ಮೀನುಗಾರರು ಸಹ ಸಹಕಾರ ನೀಡಲಿದ್ದಾರೆ. ಘಟ್ಟದ ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಗಂಗಾವಳಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿದ್ದು ಮಣ್ಣು ಮಿಶ್ರಿತ ಕೆಂಪು ನೀರು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

ಕ್ವಿಕ್‌ಪೇ ಪ್ರೈವೇಟ್ ಲಿಮಿಟೆಡ್‌ ನಡೆಸಿದ ದ್ರೋಣ್‌ ಕಾರ್ಯಾಚರಣೆ ವರದಿ…
ದೆಹಲಿಯ ಕ್ವಿಕ್‌ಪೇ ಪ್ರೈವೇಟ್ ಲಿಮಿಟೆಡ್‌ ನಡೆಸಿದ ದ್ರೋಣ್‌ ಕಾರ್ಯಾಚರಣೆಯ ಅಧ್ಯಯನದಂತೆ ಗಂಗಾವಳಿ ನದಿಯಲ್ಲಿ ಟ್ರಕ್ ಅಥವಾ ಘನ ವಸ್ತು ಇರುವ ಸಂಭಾವ್ಯ ನಾಲ್ಕು ಬಿಂದುಗಳನ್ನು ಗುರುತಿಸಲಾಗಿದೆ. ಸೋನಾರ್, ಥರ್ಮಲ್ ಇಮೇಜರ್, ಮ್ಯಾಗ್ನೆಟ್ ಲೈನ್‌ಗಳು ಮತ್ತು ಡೈಬೋಡ್ಸ್ ಡೇಟಾದ ವಿಶ್ಲೇಷಣೆಯ ಮೂಲಕ ಚಿತ್ರದಲ್ಲಿ ತೋರಿಸಿರುವಂತೆ ನಾಲ್ಕು ಘನ ವಸ್ತು ಇರಬಹುದಾದ ಸಂಭಾವ್ಯ ಬಿಂದುಗಳನ್ನು (CP) ಗುರುತಿಸಲಾಗಿದೆ.
CP4 ಬಿಂದುವು ಟ್ರಕ್‌ನ ರೂಪ ಮತ್ತು ಅಂಶಕ್ಕೆ ಹತ್ತಿರವಿರುವ ಚಿಹ್ನೆಗಳನ್ನು ಪ್ರದರ್ಶಿಸಿದೆ. CP3, CP2, ಮತ್ತು CP1 ಆ ಕ್ರಮದಲ್ಲಿ ಕಡಿಮೆ ಸಂಭವನೀಯತೆ ಹೊಂದಿವೆ. CP4 ಬಿಂದುವು ಟ್ರಕ್‌ನ ರೂಪಕ್ಕೆ ತೀರ ಹತ್ತಿರದ ಹೋಲಿಕೆ ನೀಡಿದೆ. ವಸ್ತುವು ಭೂಮಿ ಮತ್ತು ಬಂಡೆಗಳ ನಿಕ್ಷೇಪದೊಂದಿಗೆ ಓರೆಯಾದ ರಚನೆಯಲ್ಲಿ ಅಂತರ್ಗತವಾಗಿದೆ. ಹಾಗೂ ಲಾರಿಯ ಕ್ಯಾಬಿನ್ ಮೇಲ್ಮುಖವಾಗಿರಬಹುದು ಹಾಗೂ ಅದು ಭಾಗಶಃ ಹಾನಿಯಾಗಿರುವ ಹೆಚ್ಚಿನ ಸಂಭವನೀಯತೆಯಿದೆ ಎಂದು ಅಂದಾಜಿಸಿದೆ. ಡೈಎಲೆಕ್ಟ್ರಿಕ್ ಡೇಟಾ ಬ್ಯಾಂಕ್ ನಿರ್ಬಂಧದ ಕಾರಣದಿಂದ ಮಾನವ ರೂಪದ ಉಪಸ್ಥಿತಿಯನ್ನು ಖಚಿತವಾಗಿ ಕಂಡುಹಿಡಿಯಲಾಗಲಿಲ್ಲ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

ಈ CP4 ಬಿಂದುವು ರಾಷ್ಟ್ರೀಯ ಹೆದ್ದಾರಿಯ ದುರಂತ ಸ್ಥಳದಿಂದ 132 ಮೀ. ದೂರದಲ್ಲಿದೆ. ಇನ್ನುಳಿದ ಬಿಂದುಗಳಾದ CP3(110ಮೀ), CP2(65ಮೀ) ಮತ್ತು CP1( 165 ಮೀ) ದೂರದಲ್ಲಿ ಟ್ರಕ್ ಇರುವಿಕೆಯ ಕಡಿಮೆ ಸಂಭವನೀಯತೆಯನ್ನು ಹೊಂದಿವೆ. ಇವು ಕಣ್ಮರೆಯಾದ ಇನ್ನಿತರ ವಸ್ತುಗಳ ಇರುವಿಕೆಯ ಬಗ್ಗೆಯೂ ಮಾಹಿತಿ ನೀಡಿರಬಹುದು ಎಂದು ವರದಿ ತಿಳಿಸಿದೆ.
7 ನಾಟ್ಸ್‌ ಮೀರಿದ ನದಿ ನೀರಿನ ಭಾರೀ ಪ್ರವಾಹ, 30,000 ppm ಮೀರಿದ ಕೆಸರು ನೀರು ಮತ್ತು ಆರೇಂಜ್‌ ಅಲರ್ಟ್‌ ಎಚ್ಚರಿಕೆಯ ಭಾರೀ ಮಳೆಯ ಹವಾಮಾನ ಪರಿಸ್ಥಿತಿಗಳು, ಸೀಮಿತ ಪೂರ್ವಸಿದ್ಧತಾ ಸಮಯ, BIPOS ತಂಡಕ್ಕೆ ಗಂಭೀರ ತೊಡಕು ಮತ್ತು ಹೆಚ್ಚಿನ ಸವಾಲುಗಳಾಗಿವೆ ಎಂದು ಅದು ಹೇಳಿದೆ.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement