ನೀತಿ ಆಯೋಗದ ಸಭೆಗೆ ವಿಪಕ್ಷಗಳ 7 ಸಿಎಂಗಳು ಗೈರು : ಅಸಮಾಧಾನದಿಂದ ಅರ್ಧದಲ್ಲೇ ಎದ್ದು ಹೋದ ಮಮತಾ ಬ್ಯಾನರ್ಜಿ

ನವದೆಹಲಿ : ಇಂದಿನಿಂದ(ಜುಲೈ 27) ನಡೆಯುತ್ತಿರುವ ನೀತಿ ಆಯೋಗದ ೯ನೇ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ತಾರತಮ್ಯದ ಆರೋಪ ಹೊರಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಭೆಯಿಂದ ಅರ್ಧದಲ್ಲೇ ಎದ್ದು ಹೊರಬಂದಿದ್ದಾರೆ.
ನನಗೆ ಮಾತನಾಡಲು ಸಮಯ ನೀಡಲಿಲ್ಲ ಹಾಗೂ ನನ್ನ ಮೈಕ್ ಅನ್ನು ಆಫ್ ಮಾಡಲಾಯಿತು ಎಂದು ಸಭೆಯಿಂದ ಹೊರಬಂದ ನಂತರ ಅವರು ಆರೋಪಿಸಿದ್ದಾರೆ. ನೀತಿ ಆಯೋಗದ ಸಭೆಯಲ್ಲಿ ಇಂಡಿಯಾ ಮೈತ್ರಿಕೂಟದಿಂದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಮಾತ್ರ ಭಾಗವಹಿಸಿದ್ದರು.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿದೆ. ʼವಿಕಸಿತ ಭಾರತ 2047ʼ ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್, ಸಚಿವರು, ವಿಶೇಷ ಆಹ್ವಾನಿತರು ಭಾಗವಹಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ ವಿರೋಧ ಪಕ್ಷಗಳ ಮುಖ್ಯಮಂತ್ರಿ ನಾನೊಬ್ಬನೇ, ಅದಕ್ಕಾಗಿ ಕೇಂದ್ರ ಸರ್ಕಾರ ಖುಷಿ ಪಡಬೇಕಾಗಿತ್ತು. ನನಗೆ ಕೇವಲ ಐದು ನಿಮಿಷ ಮಾತನಾಡುವ ಅವಕಾಶವನ್ನು ನೀಡಲಾಗಿತ್ತು. ಐದು ನಿಮಿಷದ ನಂತರ ನನ್ನ ಮೈಕ್ ಅನ್ನು ಬಂದ್ ಮಾಡಲಾಯಿತು ” ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ನನಗೆ ಮಾತನಾಡಲು ಅವಕಾಶ ಕೊಡುವುದಕ್ಕೆ ಮುನ್ನ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 12 ನಿಮಿಷ ಮಾತನಾಡಿದ್ದಾರೆ. ಇದಕ್ಕೂ ಮುನ್ನ ಎನ್‌ಡಿಎ ಸರ್ಕಾರವಿರುವ ಮುಖ್ಯಮಂತ್ರಿಗಳಿಗೆ 15-20 ನಿಮಿಷ ಮಾತನಾಡಲು ಅವಕಾಶ ನೀಡಲಾಗಿದೆ ಈ ರೀತಿ ತಾರತಮ್ಯ ತೋರುವುದು ಸರಿಯಲ್ಲ ಎಂದು ಸಭೆಯಲ್ಲೇ ಹೇಳಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಪಕ್ಷಗಳಿಂದ ನಾನೊಬ್ಬನೇ ಸಭೆಯಲ್ಲಿ ಇದ್ದುದ್ದರಿಂದ ನನಗೆ ಹೆಚ್ಚು ಮಾತನಾಡಲು ಸಮಯಾವಕಾಶಕಾಶ ನೀಡಬೇಕಿತ್ತು. ಬದಲಿಗೆ ನನ್ನ ಧ್ವನಿಯನ್ನು ಅಡಗಿಸಲು ಹೊರಟಿದ್ದೀರಿ, ನೀವು ನನಗೆ ಮಾಡುತ್ತಿರುವ ಅವಮಾನವಲ್ಲ ಇದು, ಪ್ರಾದೇಶಿಕ ಪಕ್ಷಗಳಿಗೆ ಮಾಡುತ್ತಿರುವ ಅವಮಾನ ಎಂದು ಮಮತಾ ಬ್ಯಾನರ್ಜಿ, ಮೋದಿ ಸರ್ಕಾರದ ವಿರುದ್ದ ಕಿಡಿಕಾರಿದರು.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ನಂತರ ಬ್ರಹ್ಮೋಸ್ ಕ್ಷಿಪಣಿಗೆ ಬಂತು ಭಾರೀ ಬೇಡಿಕೆ ; ಖರೀದಿಸಲು 17 ದೇಶಗಳು ಕ್ಯೂನಲ್ಲಿ...!

ನೀತಿ ಆಯೋಗದ ಸಭೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್ ಹಾಗೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಂಡಿಲ್ಲ.
ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಈ ಸಭೆಯಲ್ಲಿ ಭಾಗವಹಿಸಲಿಲ್ಲ. ಆದರೆ ಅವರು ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರು. ಅವರ ಪ್ರತಿನಿಧಿಯಾಗಿ, ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯಕುಮಾರ ಸಿನ್ಹಾ ಭಾಗವಹಿಸಿದ್ದರು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಜೈಲಿನಲ್ಲಿದ್ದರೂ ಅವರ ಯಾವ ಪ್ರತಿನಿಧಿಯೂ ಸಭೆಯಲ್ಲಿ ಭಾಗವಹಿಸಲಿಲ್ಲ.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement