ನವದೆಹಲಿ : ಲೋಕಸಭಾ ಕಲಾಪದಲ್ಲಿ ಸೋಮವಾರ ಕೇಂದ್ರ ಬಜೆಟ್ ಕುರಿತು ಮಾತನಾಡುತ್ತಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ, ʼಹಲ್ವಾ ಕಾರ್ಯಕ್ರಮʼದ ಫೋಟೋ ಪ್ರದರ್ಶನ ಮಾಡಿದಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಗುತ್ತಾ ಮುಖ ಮುಚ್ಚಿಕೊಂಡಿದ್ದಾರೆ.
ಈ ಕಾರ್ಯಕ್ರಮದ ಫೋಟೋವನ್ನು ಲೋಕಸಭಾ ಕಲಾಪದಲ್ಲಿ ಪ್ರದರ್ಶನ ಮಾಡಿದ ರಾಹುಲ್ ಗಾಂಧಿ, ಈ ಫೋಟೋವನ್ನು ಗಮನಿಸಿ. ಇದರಲ್ಲಿ ಇರುವ 20 ಅಧಿಕಾರಿಗಳ ಪೈಕಿ ಯಾರೊಬ್ಬರೂ ಹಿಂದುಳಿದ ವರ್ಗ, ದಲಿತ ಹಾಗೂ ಆದಿವಾಸಿ ಸಮುದಾಯಕ್ಕೆ ಸೇರಿದವರು ಇಲ್ಲ ಎಂದರು. ಈ ವೇಳೆ ರಾಹುಲ್ ಗಾಂಧಿ ಅವರ ಮಾತಿನ ದಾಟಿಗೆ ನಿರ್ಮಲಾ ಸೀತಾರಾಮನ್ ತಮ್ಮ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ನಕ್ಕರು.
ರಾಹುಲ್ ಗಾಂಧಿ ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಮಾತ್ರ ಈ ರೀತಿ ಫೋಟೋ ಪ್ರದರ್ಶನ ಮಾಡುವುದು ಸಂಸತ್‌ನ ನಿಯಮಗಳಿಗೆ ಬಾಹಿರವಾದದ್ದು ಎಂದು ಪದೇ ಪದೇ ಹೇಳುತ್ತಲೇ ಇದ್ದರು. ಈ ವಿಚಾರ ಸಂಬಂಧ ಲೋಕಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ಸಹ ನಡೆಯಿತು.
ಜಾತಿ ಗಣತಿಯ ಪ್ರಾಮುಖ್ಯತೆ ಕುರಿತು ಮಾತನಾಡಿದ ರಾಹುಲ್ ಗಾಂಧಿ, ದೇಶದ ಬಹುಸಂಖ್ಯಾತ ಹಿಂದುಳಿದ ವರ್ಗಗಳು, ಎಸ್‌ಸಿ, ಎಸ್‌ಟಿ ಸಮುದಾಯದ ಯಾವೊಬ್ಬ ಅಧಿಕಾರಿಯೂ ಬಜೆಟ್ ಸಿದ್ದತಾ ಕಾರ್ಯದಲ್ಲಿ ಭಾಗಿಯಾಗಿಲ್ಲ. ಹೀಗಿರುವಾಗ ಈ ಅಧಿಕಾರಿಗಳು ದೇಶದ ಬಹುಸಂಖ್ಯಾತ ಸಮುದಾಯಕ್ಕೆ ಹೇಗೆ ನ್ಯಾಯ ಕೊಡುತ್ತಾರೆ ಎಂದು ಪ್ರತಿಪಾದಿಸಿ ಈ ಫೋಟೋ ಪ್ರದರ್ಶನ ಮಾಡಿದರು. ಜೊತೆಯಲ್ಲೇ ಕೇವಲ 20 ಅಧಿಕಾರಿಗಳೇ ಹಲ್ವಾ ಹಂಚಿಕೊಂಡರೆ ಹೇಗೆ ಎಂದೂ ರಾಹುಲ್ ಪ್ರಶ್ನಿಸಿದರು.
ಆದರೆ ಫೋಟೋ ಪ್ರದರ್ಶನಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರಾಕರಿಸಿದರು. ಆದರೆ ಈ ಸಮಯದಲ್ಲಿ ಅವರು ಏನನ್ನೋ ವಿವರಿಸಲು ಪ್ರಯತ್ನಿಸುತ್ತಿದ್ದಾಗ ಅದನ್ನು ಕೇಳಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹಣೆಯ ಮೇಲೆ ತಮ್ಮ ಎರಡೂ ಕೈಗಳನ್ನು ಮುಚ್ಚಿಕೊಂಡು ನಕ್ಕರು.
ತಮ್ಮ ಮಾತು ಮುಂದುವರೆಸಿದ ರಾಹುಲ್ ಗಾಂಧಿ, ದೇಶದ ಶೇ. 90ಕ್ಕೂ ಹೆಚ್ಚು ಮಂದಿ ಜಾತಿ ಗಣತಿ ಬಯಸಿದ್ದಾರೆ. ಆದರೆ ಕೇಂದ್ರ ಸರ್ಕಾರ ದೇಶದ ಜನರನ್ನು ಅಭಿಮನ್ಯುವಿನ ರೀತಿ ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆ ‘ಚಕ್ರವ್ಯೂಹ’ವನ್ನು ಪಿಎಂ ನರೇಂದ್ರ ಮೋದಿ ನೇತೃತ್ವದ 6 ಜನರು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಏನಿದು ‘ಹಲ್ವಾ ಸಮಾರಂಭ’?
ಇದು ಬಜೆಟ್ ವೇಳೆ ನಡೆಯುವ ಸಾಂಪ್ರದಾಯಿಕ ನಡೆದುಕೊಂಡು ಬರುತ್ತಿರುವ ಕಾರ್ಯಕ್ರಮವಾಗಿದೆ. ಸಂಪ್ರದಾಯದಂತೆ, ಪ್ರತಿ ವರ್ಷ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುವ ಸುಮಾರು 9 ರಿಂದ 10 ದಿನಗಳ ಮೊದಲು ಹಣಕಾಸು ಸಚಿವಾಲಯವು ‘ಹಲ್ವಾ ಸಮಾರಂಭ’ವನ್ನು ಆಯೋಜಿಸುತ್ತದೆ. ಸಮಾರಂಭವು ಕೇಂದ್ರ ಬಜೆಟ್ ಅನ್ನು ಮುದ್ರಿಸುವ ಪ್ರಕ್ರಿಯೆಯ ಪ್ರಾರಂಭವನ್ನು ಸೂಚಿಸುತ್ತದೆ. ಈ ವಿಧ್ಯುಕ್ತ ಚಟುವಟಿಕೆಯು ಹಣಕಾಸು ಸಚಿವಾಲಯದ (ನಾರ್ತ್ ಬ್ಲಾಕ್) ನೆಲಮಾಳಿಗೆಯಲ್ಲಿ ನಡೆಯುತ್ತದೆ, ಇದು ಮೀಸಲಾದ ಮುದ್ರಣಾಲಯದ ನೆಲೆಯಾಗಿದೆ.
ಬಜೆಟ್ ಸಿದ್ದತೆ ವೇಳೆ ಅದರ ಗೌಪ್ಯತೆ ಹಾಗೂ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಅದರ ಸೋರಿಕೆ ತಡೆಯಲು ಸುಮಾರು 9 ರಿಂದ 10 ದಿನಗಳವರೆಗೆ, ಬಜೆಟ್ ತಯಾರಿಕೆ ಅಥವಾ ಮುದ್ರಣದಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಹಣಕಾಸು ಸಚಿವಾಲಯದ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯನ್ನು ಯಾರ ಸಂಪರ್ಕಕ್ಕೂ ಸಿಗದಂತೆ ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ನೇರ ಸಂವಹನವನ್ನು ಅನುಮತಿಸದಿದ್ದರೂ, ತುರ್ತು ಸಂದರ್ಭಗಳಲ್ಲಿ, ಅಧಿಕಾರಿಗಳ ಕುಟುಂಬ ಸದಸ್ಯರು ಗೊತ್ತುಪಡಿಸಿದ ಸಂಖ್ಯೆಗೆ ಸಂದೇಶವನ್ನು ಕಳುಹಿಸಲು ಆಯ್ಕೆಯನ್ನು ಹೊಂದಿರುತ್ತಾರೆ. ಅವರ ಊಟೋಪಚಾರಗಳ ಸಿದ್ದತೆಯ ಆರಂಭದ ಸೂಚ್ಯವಾಗಿ ಸಾಂಪ್ರದಾಯಿಕವಾಗಿ ಈ ಹಲ್ವಾ ಕಾರ್ಯಕ್ರಮ ನಡೆಯುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ