ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ವಿವಿಧ ಜಲಾಶಯಗಳು ಭರ್ತಿಯಾಗಿದೆ. ಹೀಗಾಗಿ ಕದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದ್ದು, ಜಲಾಶಯದ ಕೆಳಗಿನ ಪ್ರದೇಶಗಳಿಗೆ ಮುಳುಗಡೆ ಭೀತಿ ಎದುರಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ವಿವಿಧ ತಗ್ಗು ಪ್ರದೇಶಗಳು ಜಲಾವೃಗೊಂಡಿದೆ.
ಕಾಳಿ ನದಿಯ ಹಿನ್ನಿರಿನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದರಿಂದ ಕಾರವಾರದ ಕದ್ರಾ ಜಲಾಶಯದ ಎಲ್ಲ 10 ಗೇಟ್ ಗಳನ್ನು ತೆಗೆದು 67000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಇದರಿಂದ ಕದ್ರಾ ಜಲಾಶಯದ ನದಿ ಪಾತ್ರ, ತಗ್ಗು ಪ್ರದೇಶ, ಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳ ಜನರಲ್ಲಿ ಈಗ ಮುಳಗಡೆ ಭೀತಿ ಸೃಷ್ಟಿಯಾಗಿದೆ.
ಕಳೆದ 24 ತಾಸಿನ ಅವಧಿಯಲ್ಲಿ ಜಿಲ್ಲೆಯಲ್ಲಿ 1066.5 ಮಿಮೀ ಮಳೆಯಾಗಿದೆ. ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ 199 ಮಿಮೀ ಮಳೆಯಾಗಿದ್ದು ಭಟ್ಕಳ 120 ಮಿಮೀ, ದಾಂಡೇಲಿ 46.4 ಮಿಮೀ, ಹಳಿಯಾಳ 35 ಮಿಮೀ, ಹೊನ್ನಾವರ 111.9 ಮಿಮೀ. ಜೊಯಿಡಾ 60 ಮಿಮೀ, ಕಾರವಾರ 121.6 ಮಿಮೀ, ಕುಮಟಾ 143.8 ಮಿಮೀ, ಮುಂಡಗೋಡ 12.6 ಮಿಮೀ, ಸಿದ್ದಾಪುರ 73.4 ಮಿಮೀ, ಶಿರಸಿ 105.2 ಮಿಮೀ ಹಾಗೂ ಯಲ್ಲಾಪುರದಲ್ಲಿ 37.6 ಮಿಮೀ ಮಳೆಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ