ಇ.ಡಿ., ಸಿಬಿಐ ಎರಡೂ ಪ್ರಕರಣಗಳಲ್ಲಿ ಮನೀಶ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಜಾಮೀನು

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಪಿಪಿ) ನಾಯಕ ಹಾಗೂ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ ಡಿ) ಹೂಡಿದ್ದ ಪ್ರಕರಣಗಳೆರಡರಲ್ಲೂ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ಜಾಮೀನು ಮಂಜೂರು ಮಾಡಿದೆ.
“ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ. ದೆಹಲಿ ಹೈಕೋರ್ಟ್‌ ಆದೇಶವನ್ನು ರದ್ದುಗೊಳಿಸಲಾಗಿದೆ. ಇ.ಡಿ. ಮತ್ತು ಸಿಬಿಐ ಎರಡೂ ಪ್ರಕರಣಗಳಲ್ಲಿ ಅವರಿಗೆ ಜಾಮೀನು ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ. ₹ 2 ಲಕ್ಷ ಮೊತ್ತದ ಬಾಂಡ್‌ ಪಡೆದು ಜಾಮೀನು ನೀಡಲು ಆದೇಶಿಸಲಾಗಿದೆ. ಸಿಸೋಡಿಯಾ ಅವರು ತಮ್ಮ ಪಾಸ್‌ಪೋರ್ಟನ್ನು ಪೊಲೀಸ್‌ ಠಾಣೆಗೆ ಒಪ್ಪಿಸಬೇಕು. ಮತ್ತು ಠಾಣೆಗೆ ಹಾಜರಾಗುತ್ತಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ವಿಚಾರಣೆಯಲ್ಲಿ ದೀರ್ಘಕಾಲದ ವಿಳಂಬ ಮಾಡಿರುವುದು ಸಿಸೋಡಿಯಾ ಅವರ ತ್ವರಿತ ವಿಚಾರಣೆಯ ಹಕ್ಕನ್ನು ಉಲ್ಲಂಘಿಸಿದ್ದು ತ್ವರಿತ ವಿಚಾರಣೆಯ ಹಕ್ಕು ಸ್ವಾತಂತ್ರ್ಯದ ಒಂದು ಮುಖವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅವಧಿಯೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವ ಯಾವುದೇ ಸಾಧ್ಯತೆಯಿಲ್ಲ ಮತ್ತು ವಿಚಾರಣೆಯನ್ನು ಪೂರ್ಣಗೊಳಿಸುವ ಉದ್ದೇಶಕ್ಕಾಗಿ ಆರೋಪಿತ ವ್ಯಕ್ತಿಗಳನ್ನು ಕಂಬಿ ಹಿಂದೆ ಇರಿಸುವುದು 21ನೇ ವಿಧಿಯ ಉಲ್ಲಂಘನೆ ಎಂದು ತಿಳಿಸಲಾಗಿದೆ. ಸಿಸೋಡಿಯಾ ಅವರು ಪಲಾಯನ ಮಾಡುವ, ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ
“ದೀರ್ಘಕಾಲದ ಸೆರೆವಾಸ ಅನುಭವಿಸುತ್ತಿದ್ದಲ್ಲಿ ಜಾಮೀನು ನೀಡಬಹುದೆಂದು ಹೇಳುವ ತೀರ್ಪುಗಳನ್ನು ನಾವು ಗಮನಿಸಿದ್ದೇವೆ. ಪ್ರಸ್ತುತ ಪ್ರಕರಣದಲ್ಲಿ ತ್ರಿವಳಿ ಪರೀಕ್ಷೆ ಅನ್ವಯಿಸುವುದಿಲ್ಲ” ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ವಿಚಾರಣಾ ನ್ಯಾಯಾಲಯದ ಮುಂದೆ ಸಿಸೋಡಿಯಾ ಸಲ್ಲಿಸಿದ್ದ ವಿವಿಧ ಅರ್ಜಿಗಳಿಂದಾಗಿಯೇ ವಿಚಾರಣೆ ವಿಳಂಬವಾಯಿತು ಎಂಬ ಇ ಡಿ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ.
ಅಲ್ಲದೆ ಕ್ರಿಮಿನಲ್ ಪ್ರಕರಣಗಳಲ್ಲಿ ಹೈಕೋರ್ಟ್‌ಗಳು ಮತ್ತು ವಿಚಾರಣಾ ನ್ಯಾಯಾಲಯಗಳು ಜಾಮೀನು ನೀಡುವ ಬದಲು ವಾಡಿಕೆಯಂತೆ ಜಾಮೀನು ನಿರಾಕರಿಸಿದರೆ ಅದು ಅವು ಸುರಕ್ಷಿತ ಆಟ ಆಡುತ್ತಿರುವಂತೆ ತೋರುತ್ತದೆ ಎಂದು ಕೂಡ ಅದು ಟೀಕಿಸಿದೆ.
ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಈಗಾಗಲೇ ತಾನು ತಿರಸ್ಕರಿಸಿರುವುದರಿಂದ ಅವರನ್ನು ಮತ್ತೆ ವಿಚಾರಣಾ ನ್ಯಾಯಾಲಯ ಇಲ್ಲವೇ ಹೈಕೋರ್ಟ್‌ ಸಂಪರ್ಕಿಸುವಂತೆ ಹೇಳುವುದು ನ್ಯಾಯದ ಅಪಹಾಸ್ಯವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement