ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಳಿಸಿದ್ದರ ವಿರುದ್ಧ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ನಲ್ಲಿ ಮನವಿ ಸಲ್ಲಿಸಿದ್ದು, ಈಗ ವಿನೇಶ್ ಅವರ ಮೇಲ್ಮನವಿ ವಿಚಾರಣೆಯ ಗಡುವನ್ನು ಆಗಸ್ಟ್ 11 ರವರೆಗೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ವಿಸ್ತರಿಸಿದೆ.
ವಾಸ್ತವವಾಗಿ ವಿನೇಶ್ ಅವರ ಮೇಲ್ಮನವಿಯ ತೀರ್ಪು ಶನಿವಾರ ರಾತ್ರಿಯ ಒಳಗೆ ಬರಬೇಕಿತ್ತು. ಆದರೆ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್‌ನ ತಾತ್ಕಾಲಿಕ ವಿಭಾಗದ ಅಧ್ಯಕ್ಷರು ಇದನ್ನು ಮುಂದೂಡಿದ್ದಾರೆ. ಶನಿವಾರ ರಾತ್ರಿ 9:30 ಕ್ಕೆ ತೀರ್ಪು ಬರಲಿದೆ ಎಂದು ಮೊದಲು ಹೇಳಲಾಗಿತ್ತು. ಇದೀಗ ಅದನ್ನು ಮುಂದೂಡಲಾಗಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ತೀರ್ಪು ಭಾನುವಾರ (ಆಗಸ್ಟ್ 11) ಹೊರಬೀಳಲಿದೆ ಎಂದು ಸ್ಪಷ್ಟಪಡಿಸಿದೆ.
100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕಾಗಿ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ 50 ಕೆಜಿ ಫ್ರೀ-ಸ್ಟೈಲ್ ಫೈನಲ್‌ನಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿತ್ತು. ಈ ಅನರ್ಹತೆಯನ್ನು ಅವರು ಸಿಎಎಸ್ (CAS) ನಲ್ಲಿ ಪ್ರಶ್ನಿಸಿದ್ದಾರೆ. ಹಾಗೂ ತಮಗೆ ಬೆಳ್ಳಿ ಪದಕ ನೀಡುವಂತೆ ಕೋರಿದ್ದಾರೆ.
ವಾಸ್ತವವಾಗಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಯಾವುದಾದರೂ ಮೇಲ್ಮನವಿ ಬಂದರೆ, ಇದಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನೀಡಲು 24 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಆದರೆ, ವಿನೇಶ್ ಫೋಗಟ್ ಪ್ರಕರಣದಲ್ಲಿ ಇದು ವಿಳಂಬವಾಗಲಿದೆ. ಸಿಎಎಸ್ ಅಡ್ ಹಾಕ್ ವಿಭಾಗದ ಅಧ್ಯಕ್ಷರು ಸಮಿತಿಗೆ ತೀರ್ಪನ್ನು ನೀಡಲು ಸಮಯದ ಗಡುವನ್ನು ಕೊಂಚ ವಿಸ್ತರಿಸಿದ್ದಾರೆ. ಇದರ ಪ್ರಕಾರ, ಈಗ ಸಮಿತಿಯು ತನ್ನ ನಿರ್ಧಾರವನ್ನು ಆಗಸ್ಟ್ 11ರ ಸ್ಥಳೀಯ ಕಾಲಮಾನ ಸಂಜೆ 6 ಗಂಟೆಯೊಳಗೆ ನೀಡಬಹುದು ಎಂದು ವರದಿಯಾಗಿದೆ.
ಸುಮಾರು 3 ಗಂಟೆಗೂ ಹೆಚ್ಚು ಕಾಲ ವಿಚಾರಣೆ
ವಿನೇಶ್ ಫೋಗಟ್ ಅವರ ಮನವಿಯನ್ನು ಶುಕ್ರವಾರ ಸಂಜೆ 3 ಗಂಟೆಗಳಿಗೂ ಹೆಚ್ಚು ಕಾಲ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಈ ವಿಚಾರಣೆಯಲ್ಲಿ ವಿನೇಶ್ ಫೋಗಟ್ ಕೂಡ ವರ್ಚುವಲ್‌ನಲ್ಲಿ ಭಾಗವಹಿಸಿದ್ದರು. ನ್ಯಾಯಾಲಯದ ಮುಂದೆ ವಿನೇಶ್ ತಮ್ಮ ಹೇಳಿಕೆಯನ್ನು ದಾಖಲಿಸಿದ್ದು, ಜಂಟಿ ಬೆಳ್ಳಿ ಪದಕ ನೀಡುವಂತೆ ಮನವಿ ಮಾಡಿದ್ದಾರೆ.
ವಿನೇಶ್ ಫೋಗಟ್ ಅವರು ಸೆಮಿಫೈನಲ್‌ನಲ್ಲಿ ಜಯಗಳಿಸುವವರೆಗೆ ಅವರ ತೂಕವು ನಿಗದಿತ ಮಿತಿಯಲ್ಲಿತ್ತು. ಆದ್ದರಿಂದ ವಿನೇಶ್ ಅವರಿಗೆ ಕನಿಷ್ಠ ಬೆಳ್ಳಿ ಪದಕವನ್ನು ನೀಡಬೇಕು ಎಂದು ಪ್ರಸಿದ್ಧ ಹಿರಿಯ ವಕೀಲರಾದ ಹರೀಶ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ಸಿಎಎಸ್ ಮುಂದೆ ವಿನೇಶ್ ಪರ ವಾದ ಮಂಡಿಸಿದ್ದಾರೆ. ಅಲ್ಲದೆ ಈ ಪ್ರಕರಣದ ನಿರ್ಧಾರ ವಿನೇಶ್ ಪರವಾಗಿ ಬರಲಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ. ಒಂದು ವೇಳೆ ವಿನೇಶ್ ಪರವಾಗಿ ತೀರ್ಪು ಬಂದರೆ ಅವರಿಗೆ ಬೆಳ್ಳಿ ಪದಕ ಸಿಗಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ