ನವದೆಹಲಿ: ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಲು ಕೋರಿರುವ ತಮ್ಮ ಮನವಿ ಬಗ್ಗೆ ನಿರ್ಧರಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನಗಳನ್ನು ನೀಡಬೇಕೆಂದು ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ತಾನು ಸಲ್ಲಿಸಿದ್ದ ದೂರಿನ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸ್ವಾಮಿ ಕೋರಿದ್ದಾರೆ.
ವಕೀಲ ಸತ್ಯ ಸಬರ್ವಾಲ್ ಮೂಲಕ ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿ ಸಲ್ಲಿಕೆಯಾಗಿದ್ದು, ಮುಂದಿನ ವಾರ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ರಾಹುಲ್ ಗಾಂಧಿ ಅವರು ಬ್ರಿಟನ್‌ನಲ್ಲಿ 2003 ರಲ್ಲಿ ನೊಂದಾಯಿಸಿರುವ ಬ್ಯಾಕ್‌ಆಪ್ಸ್ ಲಿಮಿಟೆಡ್ ಹೆಸರಿನ ಕಂಪನಿಯ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಸ್ವಾಮಿ 2019 ರಲ್ಲಿ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಅಕ್ಟೋಬರ್ 10, 2005 ಮತ್ತು ಅಕ್ಟೋಬರ್ 31, 2006 ರಂದು ಸಲ್ಲಿಸಿದ ಕಂಪನಿಯ ವಾರ್ಷಿಕ ರಿಟರ್ನ್ಸ್‌ನಲ್ಲಿ ರಾಹುಲ್ ಗಾಂಧಿಯವರು ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷ್ ಎಂದು ಘೋಷಿಸಿದ್ದರು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಫೆಬ್ರವರಿ 17, 2009 ರಂದು ದಾಖಲಿಸಿರುವ ಕಂಪನಿಯ ವಿಸರ್ಜನೆಯ ಅರ್ಜಿಯಲ್ಲಿ ರಾಹುಲ್ ಗಾಂಧಿಯವರ ರಾಷ್ಟ್ರೀಯತೆಯನ್ನು ಮತ್ತೆ ಬ್ರಿಟಿಷ್ ಎಂದೇ ಉಲ್ಲೇಖಿಸಲಾಗಿದೆ. ಇದು ಭಾರತದ ಸಂವಿಧಾನ ಮತ್ತು ಭಾರತೀಯ ಪೌರತ್ವ ಕಾಯಿದೆ, 1955ರ ಅನುಚ್ಛೇದ 9 ಅನ್ನು ಉಲ್ಲಂಘಿಸುತ್ತದೆ ಎಂದು ಸುಬ್ರಮಣಿಯನ್ ಸ್ವಾಮಿ ಪ್ರತಿಪಾದಿಸಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರ ಪತ್ರದ ಹಿನ್ನೆಲೆಯಲ್ಲಿ ಗೃಹ ಇಲಾಖೆಯು ಏಪ್ರಿಲ್ 29, 2019 ರಂದು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಹದಿನೈದು ದಿನಗಳೊಳಗೆ ಈ ವಿಷಯದಲ್ಲಿ “ವಾಸ್ತವ ಸ್ಥಿತಿಯನ್ನು ತಿಳಿಸುವಂತೆ” ಕೇಳಿಕೊಂಡಿತ್ತು.
ಇದೀಗ, ಸುಬ್ರಮಣಿಯನ್ ಸ್ವಾಮಿ ಅವರು ತಾವು ಗೃಹ ಇಲಾಖೆಗೆ ಪತ್ರ ಬರೆದು ಐದು ವರ್ಷಗಳಿಗಿಂತ ಹೆಚ್ಚು ಸಮಯವೇ ಸಂದಿದ್ದರೂ ಈ ಕುರಿತು ಯಾವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನುವ ಬಗ್ಗೆ ಗೃಹ ಇಲಾಖೆಯಿಂದ ಯಾವುದೇ ಸ್ಪಷ್ಟನೆ ದೊರೆತಿಲ್ಲ ಎಂದು ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕಾಂಗ್ರೆಸ್ ನಾಯಕ ಬ್ರಿಟಿಷ್ ಪ್ರಜೆ ಎಂದು ಕಳೆದ ವಾರ ಸ್ವಾಮಿ ಹೇಳಿಕೊಂಡಿದ್ದರು. ಅವರು ರಾಹುಲ್ ಅವರ “ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಿದ ವಾರ್ಷಿಕ ರಿಟರ್ನ್” ಎಂದು ಹೇಳುವ ದಾಖಲೆಯನ್ನು ಹಂಚಿಕೊಳ್ಳುವ ಮೂಲಕ ಆರೋಪ ಮಾಡಿದರು. ಅವರು X ನಲ್ಲಿ ಡಾಕ್ಯುಮೆಂಟ್‌ನ ಚಿತ್ರವನ್ನು ಹಂಚಿಕೊಂಡಿದ್ದರು. ಮತ್ತು ಈ ದಾಖಲೆ ಅವರು ಬ್ರಿಟಿಷ್ ಪ್ರಜೆಯಾಗಿ ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಿದ ವಾರ್ಷಿಕ ರಿಟರ್ನ್ ಎಂದು ಹೇಳಿದರು. ರಾಹುಲ್ ವಿರುದ್ಧ ಕ್ರಮ ಕೈಗೊಳ್ಳದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋನಿಯಾ ಗಾಂಧಿಯವರು “ಬ್ಲ್ಯಾಕ್‌ಮೇಲ್” ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ