ಮೂರು ಆಯ್ಕೆಗಳಿವೆ…: ಬಿಜೆಪಿ ಸೇರ್ಪಡೆಯಾಗುವ ವದಂತಿ ಮಧ್ಯೆ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೇನ್‌ ಮಾರ್ಮಿಕ ಹೇಳಿಕೆ

ನವದೆಹಲಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಚಂಪೈ ಸೊರೇನ್‌ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿಗಳ ನಡುವೆ ತಾನು ಸಂಪೂರ್ಣ ಜೀವನವನ್ನು ಸಮರ್ಪಿಸಿಕೊಂಡ ಪಕ್ಷದಲ್ಲಿ ನನಗೆ ಅಸ್ತಿತ್ವವಿಲ್ಲ ಎಂಬ ಭಾವನೆ ಬರುವಂತಾಗಿದೆ ಹಾಗೂ ತನಗೆ ಪರ್ಯಾಯ ಮಾರ್ಗಹುಡುಕುವ ಅನಿವಾರ್ಯತೆ ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.
ಜಾರ್ಖಂಡ್ ವಿಧಾನಸಭೆ ಚುನಾವಣೆಗೂ ಮುನ್ನ ಚಂಪೈ ಸೊರೇನ್‌ ಅವರ ಈ ಹೇಳಿಕೆಯನ್ನು ಅವರು ಮತ್ತೊಂದು ಪಕ್ಷ ಸೇರುವ ಸುಳಿವು ಎಂದು ವಿಶ್ಲೇಷಿಸಲಾಗುತ್ತಿದೆ. ಚಂಪೈ ಸೊರೇನ್‌ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳ ನಡುವೆ ದೆಹಲಿ ತಲುಪಿದ ಕೆಲವೇ ಗಂಟೆಗಳ ನಂತರ ಅವರ ಹೇಳಿಕೆ ಹೊರಬಿದ್ದಿದೆ.
‘ಮುಖ್ಯಮಂತ್ರಿಯಾಗಿ ಕಹಿ ಅವಮಾನ ಅನುಭವಿಸಿದ್ದೇನೆ’
ಎಕ್ಸ್‌ನಲ್ಲಿ ಹಿಂದಿಯಲ್ಲಿ ಸುದೀರ್ಘ ಪೋಸ್ಟ್‌ನಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ತಾನು ಮುಖ್ಯಮಂತ್ರಿಯಾಗಿ ಕಹಿ ಅವಮಾನವನ್ನು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ. ಜುಲೈ 3 ರಂದು ತನ್ನ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಪಕ್ಷದ ನಾಯಕತ್ವವು ತನಗೆ ತಿಳಿಯದೆ ರದ್ದುಗೊಳಿಸಿದೆ ಎಂದು ಅವರು ಹೇಳಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಯ ಕಾರ್ಯಕ್ರಮಗಳನ್ನು ಮತ್ತೊಬ್ಬರು ರದ್ದುಗೊಳಿಸುವುದಕ್ಕಿಂತ ಅವಮಾನಕರವಾದದ್ದು ಮತ್ತೇನಿದೆ? ಅಪಮಾನದ ಈ ಕಹಿ ಮಾತ್ರೆ ನುಂಗಿದರೂ ಬೆಳಗ್ಗೆಯೇ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮವದ್ದು, ಮಧ್ಯಾಹ್ನ ಶಾಸಕಾಂಗ ಪಕ್ಷದ ಸಭೆ ನಡೆಯುವುದರಿಂದ ಹಾಜರಾಗುತ್ತೇನೆ ಎಂದಿದ್ದೆ. ಆದರೆ, ಅಲ್ಲಿಂದ ಸಾರಾಸಗಟಾಗಿ ನನ್ನನ್ನು ನಿರಾಕರಿಸಲಾಯಿತು ಎಂದು ಚಂಪೈ ಸೊರೇನ್‌ ಹೇಳಿದ್ದಾರೆ.

‘ನನ್ನ ಆತ್ಮಗೌರವಕ್ಕೆ ಧಕ್ಕೆ’
“ಕಳೆದ ನಾಲ್ಕು ದಶಕಗಳ ನನ್ನ ನಿಷ್ಕಳಂಕ ರಾಜಕೀಯ ಪಯಣದಲ್ಲಿ ಮೊದಲ ಬಾರಿಗೆ ನಾನು ಒಳಗಿನಿಂದ ನೋವನುಭವಿಸಿದೆ. ಏನು ಮಾಡಬೇಕೆಂದು ನನಗೆ ಅರ್ಥವಾಗಲಿಲ್ಲ. ಎರಡು ದಿನಗಳ ಕಾಲ ನಾನು ಶಾಂತವಾಗಿ ಕುಳಿತು ಆತ್ಮಾವಲೋಕನ ಮಾಡಿಕೊಂಡೆ, ಇಡೀ ಘಟನೆಯಲ್ಲಿ ನನ್ನ ತಪ್ಪನ್ನು ಹುಡುಕುತ್ತಲೇ ಇದ್ದೆ. ನನಗೆ ಅಧಿಕಾರದ ದುರಾಸೆ ಸ್ವಲ್ಪವೂ ಇರಲಿಲ್ಲ, ಆದರೆ ನನ್ನ ಸ್ವಾಭಿಮಾನಕ್ಕೆ ಬಿದ್ದ ಈ ಹೊಡೆತವನ್ನು ಯಾರಿಗೆ ತೋರಿಸಲಿ? ನನ್ನ ಸ್ವಂತ ಜನರಿಂದ ಅನುಭವಿಸಿದ ನೋವನ್ನು ನಾನು ಎಲ್ಲಿ ಹೇಳಲಿ ಎಂದು ಜಾರ್ಖಂಡ ಮಾಜಿ ಮುಖ್ಯಮಂತ್ರಿ ಸಾಮಾಜಿಕ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹೇಮಂತ ಸೊರೇನ್‌ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿದಾಗ ಅವರು “ಸ್ವಾಭಿಮಾನಕ್ಕೆ ದೊಡ್ಡ ಹೊಡೆತ” ನೀಡಿದರು. ಮುಖ್ಯಮಂತ್ರಿ ಹೇಮಂತ ಸೊರೇನ್‌ ಜೈಲಿನಿಂದ ಹೊರಬಂದ ನಂತರ ಶಾಸಕರು ಮತ್ತು ಇತರ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯ ಕಾರ್ಯಸೂಚಿಯ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.
”ಶಾಸಕಾಂಗ ಪಕ್ಷದ ಸಭೆ ಕರೆಯುವ ಹಕ್ಕು ಮುಖ್ಯಮಂತ್ರಿಗೆ ಇದೆ, ಆದರೆ ಸಭೆಯ ಅಜೆಂಡಾವನ್ನೂ ನನಗೆ ಹೇಳಿಲ್ಲ, ಸಭೆಯ ವೇಳೆ ರಾಜೀನಾಮೆ ನೀಡುವಂತೆ ಹೇಳಿದ್ದು, ಅಚ್ಚರಿಯಾದರೂ ನನಗೆ ಅಧಿಕಾರದ ಆಸೆ ಇರಲಿಲ್ಲ. ಹಾಗಾಗಿ ನಾನು ತಕ್ಷಣವೇ ರಾಜೀನಾಮೆ ನೀಡಿದ್ದೇನೆ, ಆದರೆ ನನ್ನ ಆತ್ಮಗೌರವಕ್ಕೆ ಹಾನಿಯಾದ ಕಾರಣ ನನ್ನ ಹೃದಯವು ಭಾವುಕವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮನೆಯಲ್ಲೇ ಟೆನಿಸ್ ಆಟಗಾರ್ತಿ ರಾಧಿಕಾ ಯಾದವಗೆ ಗುಂಡಿಕ್ಕಿ ಕೊಂದ ತಂದೆ....!

” ಮೂರು ದಿನಗಳಿಂದ ನಾನು ಎದುರಿಸುತ್ತಿರುವ ಅವಮಾನಕರ ನಡವಳಿಕೆಯಿಂದಾಗಿ ನಾನು ತುಂಬಾ ಭಾವುಕನಾಗಿದ್ದೆ, ನಾನು ನನ್ನ ಕಣ್ಣೀರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೆ, ಆದರೆ ಅವರು ಕುರ್ಚಿಯಲ್ಲಿ ಮಾತ್ರ ಆಸಕ್ತಿ ಹೊಂದಿದ್ದರು. ನನ್ನ ಇಡೀ ಜೀವನವನ್ನೇ ಮುಡಿಪಾಗಿಟ್ಟ ಆ ಪಕ್ಷದಲ್ಲಿ ನನಗೆ ಅಸ್ತಿತ್ವವೇ ಇಲ್ಲ ಎಂಬಂತೆ ಭಾಸವಾಯಿತು. ಈ ಮಧ್ಯೆ ಇಂತಹ ಹಲವು ಅವಮಾನಕರ ಘಟನೆಗಳು ನಡೆದಿದ್ದು, ಅದನ್ನು ಈಗಲೇ ಪ್ರಸ್ತಾಪಿಸಲು ಬಯಸುವುದಿಲ್ಲ. ತುಂಬಾ ಅವಮಾನ ಮತ್ತು ತಿರಸ್ಕಾರದ ನಂತರ, ನಾನು ಪರ್ಯಾಯ ದಾರಿಯನ್ನು ಹುಡುಕಲು ಬಲವಂತ ಪಡಿಸಲಾಯಿತು ಎಂದು ಚಂಪೈ ಸೊರೇನ್‌ ಹೇಳಿದರು.
“ಭಾರವಾದ ಹೃದಯದಿಂದ, ಇಂದಿನಿಂದ ನನ್ನ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗಲಿದೆ ಎಂದು ನಾನು ಅದೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದೇನೆ. ಇದರಲ್ಲಿ ನನಗೆ ಮೂರು ಆಯ್ಕೆಗಳಿವೆ. ಮೊದಲನೆಯದು, ರಾಜಕೀಯದಿಂದ ನಿವೃತ್ತಿ, ಎರಡನೆಯದು, ನನ್ನದೇ ಆದ ಪ್ರತ್ಯೇಕ ಸಂಘಟನೆಯನ್ನು ಸ್ಥಾಪಿಸುವುದು ಮತ್ತು ಮೂರನೆಯದಾಗಿ, ನಾನು ಈ ಹಾದಿಯಲ್ಲಿ ಒಬ್ಬ ಒಡನಾಡಿಯನ್ನು ಕಂಡುಕೊಂಡರೆ, ಅವರೊಂದಿಗೆ ಆ ದಿನದಿಂದ ಇಂದಿನವರೆಗೆ ಮತ್ತು ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯವರೆಗೆ ಮತ್ತಷ್ಟು ಪ್ರಯಾಣಿಸುವೆ. ಈ ಪ್ರಯಾಣದಲ್ಲಿ ನನಗೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಅವರು ಪೋಸ್ಟ್ ನಲ್ಲಿ ಹೇಳಿದ್ದಾರೆ.

ಮಾಜಿ ಸಿಎಂ ಚಂಪೈ ಸೊರೇನ್‌ ಬಿಜೆಪಿ ಸೇರ್ತಾರಾ..?
ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಹೇಮಂತ್ ಸೊರೇನ್‌ ನೇತೃತ್ವದ ಜಾರ್ಖಂಡ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಚಂಪೈ ಸೊರೇನ್‌ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮಾಜಿ ಶಾಸಕ ಲೋಬಿನ್ ಹೆಂಬ್ರೋಮ್ ಕೂಡ ಸೊರೇನ್‌ ಅವರೊಂದಿಗೆ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳು ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿವೆ.
ಆದರೆ, ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದ ನಂತರ ಬಿಜೆಪಿಗೆ ಸೇರುವ ಯೋಜನೆ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, “ಹಮ್ ಅಭಿ ಜಹಾಂ ಹೈ ವಹೀಂ ಪರ್ ಹೈ ( ಈಗ ನಾನು ಎಲ್ಲಿದ್ದೇನೆಯೋ ಅಲ್ಲಿಯೇ ಇದ್ದೇನೆ)” ಎಂದು ಅವರು ಹೇಳಿದ್ದಾರೆ. ವೈಯಕ್ತಿಕ ಕಾರಣಕ್ಕಾಗಿ ದೆಹಲಿಗೆ ಬಂದಿದ್ದು, ಮಗಳನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
ಜುಲೈ 4 ರಂದು ಜೆಎಂಎಂ (JMM) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್ ಜಾರ್ಖಂಡ್‌ನ 13ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನದ ಮೊದಲು, ಜುಲೈ 3ರಂದು ಚಂಪೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದ ನಂತರ ಹೇಮಂತ್ ಸೊರೆನ್ ಜೂನ್ 28 ರಂದು ಜೈಲಿನಿಂದ ಬಿಡುಗಡೆಗೊಂಡರು. ಅವರು ಆಪಾದಿತ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೇನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು

ಪ್ರಮುಖ ಸುದ್ದಿ :-   ವೀಡಿಯೊ.. |ಹಾಸ್ಯನಟ ಕಪಿಲ್ ಶರ್ಮಾ ಕೆಫೆ ಮೇಲೆ ಒಂಬತ್ತು ಗುಂಡು ಹಾರಿಸಿದ ಖಲಿಸ್ತಾನಿ ಭಯೋತ್ಪಾದಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement