ಬೆಂಗಳೂರು: ರೀಲ್ಗಳನ್ನು ಮಾಡುವ ಭರಾಟೆ ದೇಶದ ಯುವಕರನ್ನು ಆವರಿಸಿದೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಲು ಇನ್ಸ್ಟಾಗ್ರಾಂ (Instagram)ರೀಲ್ಗಳಿಗಾಗಿ ವೀಡಿಯೊಗಳನ್ನು ಚಿತ್ರೀಕರಿಸಲು ಯಾವುದೇ ಹಂತಕ್ಕೆ ಹೋಗಿ ಅಪಾಯ ತಂದುಕೊಂಡ ಅನೇಕ ಉದಾಹರಣೆಗಳಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಲೈಕ್ಗಳು ಮತ್ತು ಫಾಲೋವರ್ಸ್ಗಳಿಗಾಗಿ ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡುತ್ತಾರೆ, ಅಲ್ಲದೆ ಇತರರ ಜೀವವನ್ನೂ ಅಪಾಯಕ್ಕೆ ಒಡ್ಡುತ್ತಾರೆ. ಇದೇ ಇಂಥಹದ್ದೇ ವಿದ್ಯಮಾನವೊಂದರಲ್ಲಿ ಬೆಂಗಳೂರಿನಲ್ಲಿ ಕೆಲವರು ನಡು ರಸ್ತೆಯಲ್ಲಿ ತಮ್ಮ ಸ್ಕೂಟರ್ನಲ್ಲಿ ಜೀವಕ್ಕೆ ಅಪಾಯ ತಂದೊಡ್ಡಬಹುದಾದ ಸ್ಟಂಟ್ ಮಾಡುತ್ತಿದ್ದಾಗ ಸಾರ್ವಜನಿಕರೇ ಅವರಿಗೆ ಬುದ್ಧಿ ಕಲಿಸಿದ್ದಾರೆ.
ಬೆಂಗಳೂರು ಬಳಿಯ ಜನನಿಬಿಡ ಮೇಲ್ಸೇತುವೆಯಲ್ಲಿ ಕೆಲವರು ಅಪಾಯಕಾರಿ ಸ್ಟಂಟ್ ಮಾಡುವ ಮೂಲಕ ಉಳಿದ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ರೋಸಿ ಹೋಗಿದ್ದ ಸಾರ್ವಜನಿಕರು ಈ ವಿಚಾರವನ್ನು ತಾವೇ ಕೈಗೆತ್ತಿಕೊಂಡು ಯುವಕರಿಗೆ ತಕ್ಕ ಪಾಠ ಕಲಿಸಲು ಬೆಂಗಳೂರು ಬಳಿಯ ಫ್ಲೈ ಓವರ್ನಿಂದ ಎರಡು ಸ್ಕೂಟರ್ಗಳನ್ನು ಎಸೆದಿದ್ದಾರೆ.
ಆಗಸ್ಟ್ 15 ರಂದು ಬೆಂಗಳೂರು ಸಮೀಪದ ತುಮಕೂರು ರಸ್ತೆಯ ಅಡಕಮಾರನಹಳ್ಳಿ ಬಳಿಯ ಫ್ಲೈಓವರ್ ಕೆಲವರು ತಮ್ಮ ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಫ್ಲೈಓವರ್ ಮೇಲಿಂದ ಸರ್ವಿಸ್ ರಸ್ತೆಗೆ ಎರಡು ಸ್ಕೂಟರ್ಗಳನ್ನು ಎಸೆಯಲಾಗಿದೆ. ಕೋಪಗೊಂಡಿದ್ದ ಪ್ರಯಾಣಿಕರು ಹಾಗೂ ಹಲವಾರು ವಾಹನ ಸವಾರರು ಈ ದೃಶ್ಯವನ್ನು ನೋಡಿದ ನಂತರ ಈ ವಿಚಾರವನ್ನು ತಾವೇ ಕೈಗೆತ್ತಿಕೊಂಡು ಇಂಥ ಹುಡುಗಾಟ ಪ್ರದರ್ಶಿಸವವರಿಗೆ ಪಾಠ ಕಲಿಸಲು ಎರಡು ಸ್ಕೂಟರ್ಗಳನ್ನು ಫ್ಲೈಓವರ್ನಿಂದ ಕೆಳಗಿನ ರಸ್ತೆಗೆ ಎಸೆದಿದ್ದಾರೆ. ನಂತರ ಫ್ಲೈಓವರ್ ಮೇಲೆ ಸ್ಟಂಟ್ ಮಾಡುತ್ತಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಇನ್ಸ್ಟಾಗ್ರಾಮ್ ರೀಲ್ಗಾಗಿ ವೀಡಿಯೊ ಮಾಡುತ್ತಿದ್ದ ಸವಾರನನ್ನು ಹಿಡಿದು ಅವರ ಬೈಕನ್ನು ಸೇತುವೆಯಿಂದ ಎಸೆದ ನಂತರ ಅದು ಜಖಂಗೊಂಡಿದೆ. ಜನರು ಸೇತುವೆಯಿಂದ ಸ್ಕೂಟರ್ ಅನ್ನು ಎಸೆದ ವೀಡಿಯೊ ವೈರಲ್ ಆಗಿದ್ದು, ಸ್ಕೂಟರ್ ಸೇತುವೆಯಿಂದ ಬಿದ್ದು ಜಖಂಗೊಂಡಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ವೀಲಿಂಗ್ ಮಾಡುವವರಿಗೆ ಇದೇ ರೀತಿ ಮಾಡಿದರೆ ಇಂತಹ ಪ್ರಕರಣಗಳಿಗೆ ಬ್ರೇಕ್ ಹಾಕಬಹುದು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಬೈಕ್ ಕೆಳಗೆ ಎಸೆದ ಕ್ರಮವನ್ನು ಅನೇಕರು ಸಮರ್ಥನೆ ಮಾಡಿಕೊಂಡಿದ್ದಾರೆ. ಇಂತಹ ಪುಂಡರಿಗೆ ಕಾನೂನು ಭಯವಿಲ್ಲ, ಪೊಲೀಸರು ಕೂಡ ಏನೂ ಮಾಡದೇ ಇದ್ದಾಗ ಜನರೇ ಇಂತಹ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ