ಬಾಂಗ್ಲಾದೇಶದ ಪ್ರಧಾನಿಗೆ ಬಂದ ಸ್ಥಿತಿ ರಾಜ್ಯಪಾಲರಿಗೂ ಬರಬಹುದು: ಕಾಂಗ್ರೆಸ್ ಪರಿಷತ್‌ ಸದಸ್ಯನ ವಿವಾದಾತ್ಮಕ ಹೇಳಿಕೆ

ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ನೀಡಿದ ಅನುಮತಿಯನ್ನು ಹಿಂಪಡೆಯದಿದ್ದರೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು “ಬಾಂಗ್ಲಾದೇಶದಂತಹ ಸನ್ನಿವೇಶ” ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಬೆದರಿಕೆ ಹಾಕಿದ್ದಾರೆ.
ಮಂಗಳೂರಿನಲ್ಲಿ ರಾಜ್ಯಪಾಲರ ನಿರ್ಧಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ರಾಜ್ಯಪಾಲರು ತಮ್ಮ ಆದೇಶವನ್ನು ಹಿಂಪಡೆಯದಿದ್ದರೆ ಅಥವಾ ರಾಷ್ಟ್ರಪತಿಗಳು ಹಿಂತೆಗೆದುಕೊಳ್ಳುವಂತೆ ಮಾಡದಿದ್ದರೆ, ಬಾಂಗ್ಲಾದೇಶದ ಪ್ರಧಾನಿ ಪಲಾಯನ ಮಾಡಿದ ಗತಿಯಂತೆಯೇ ಆಗಲಿದೆ. ನಾವು ರಾಜ್ಯಪಾಲರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ, ಇಲ್ಲಿ ರಾಜ್ಯಪಾಲರು ಓಡಿಹೋಗುತ್ತಾರೆ ಎಂದು ಅವರು ಹೇಳಿದರು. ಡಿಸೋಜಾ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರೀ ಪ್ರತಿಭಟನೆಗಳ ನಡುವೆ ಆಗಸ್ಟ್ 5 ರಂದು ದೇಶದಿಂದ ಪಲಾಯನ ಮಾಡಿರುವ ಘಟನೆಯನ್ನು ಉಲ್ಲೇಖಿಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಪರ್ಯಾಯ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಆಗಸ್ಟ್ 17 ರಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡಿದ್ದರು.
ಸಿದ್ದರಾಮಯ್ಯ ಅವರು ರಾಜ್ಯಪಾಲರ ಆದೇಶವನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಮುಂದಿನ ವಿಚಾರಣೆಯ ದಿನಾಂಕ ಆಗಸ್ಟ್ 29 ರವರೆಗೆ ಮುಖ್ಯಮಂತ್ರಿ ವಿರುದ್ಧ ಯಾವುದೇ ತ್ವರಿತ ಕ್ರಮ ಕೈಗೊಳ್ಳದಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿದೆ.
ಡಿಸೋಜಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಭರತ್ ಶೆಟ್ಟಿ, ”ರಾಜ್ಯಪಾಲರನ್ನು ವಾಪಸ್ ಕಳುಹಿಸದಿದ್ದರೆ ಕರ್ನಾಟಕದಲ್ಲಿ ಬಾಂಗ್ಲಾದೇಶದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಹೇಳುವ ಮೂಲಕ ಗೌರವಾನ್ವಿತ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ ದ್ವೇಷಪೂರಿತ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಭಟ್ಕಳ | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ; ಮಗನಿಗೆ ಗಲ್ಲು ಶಿಕ್ಷೆ, ಅಪ್ಪನಿಗೆ ಜೀವಾವಧಿ ಶಿಕ್ಷೆ ಪ್ರಕಟ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement