ಮಂಗಳೂರು : ಕೇರಳದಿಂದ ಮಂಗಳೂರು ನಗರಕ್ಕೆ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಅಂತಾರಾಜ್ಯ ಖೋಟಾ ನೋಟು ಚಲಾವಣೆ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಹಾಗೂ ಈ ಸಂಬಂಧ ನಾಲ್ವರನ್ನು ಬಂಧಿಸಿದ್ದು, ಅವರಿಂದ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ 500 ರೂಪಾಯಿ ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ಮಂಗಳೂರು ನಗರದ ಕ್ಲಾಕ್ ಟವರ್ ಪರಿಸರದ ಲಾಜ್ ವೊಂದರ ಬಳಿ ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ವಿ. ಪ್ರಿಯೇಶ(38) ವಿನೋದಕುಮಾರ.ಕೆ(33), ಅಬ್ದುಲ್ ಖಾದರ್ ಎಸ್.ಎ (58) ಅವರು ಕೇರಳದ ಕಾಸರಗೋಡು ಜಿಲ್ಲೆಯವರು ಎಂದು ಹೇಳಲಾಗಿದ್ದು, ಅಯೂಬ್ ಖಾನ್ (51) ಎಂಬಾತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರ ಎನ್ನಲಾಗಿದೆ. ಅವರಿಂದ 2,13,500 ಮೌಲ್ಯದ 500 ರೂ. ಮುಖಬೆಲೆಯ 427 ಖೋಟಾ ನೋಟುಗಳು, ಹಾಗೂ 4 ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿ ಸುಲಭವಾಗಿ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿದ್ದಾರೆ. ಆರೋಪಿಗಳ ಪೈಕಿ ಪ್ರಿಯೇಶ ಎಂಬಾತನು ಕಾಸರಗೋಡು ಜಿಲ್ಲೆಯ ಚೆರ್ಕಳ ಎಂಬಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದು, ಈ ಪ್ರಿಂಟಿಂಗ್ ಪ್ರೆಸ್ ನಲ್ಲಿ ಈ ಖೋಟಾ ನೋಟುಗಳನ್ನು ತಯಾರಿಸುತ್ತಿದ್ದ, ಈ ಖೋಟಾ ನೋಟುಗಳನ್ನು ತಯಾರಿಸಲು ಬೇಕಾದ ಕಚ್ಚಾ ಸಾಮಗ್ರಿಗಳನ್ನು ಕೇರಳದ ಕೋಝೀಕೋಡ್ ಮತ್ತು ದೆಹಲಿಯಿಂದ ಖರೀದಿಸುತ್ತಿದ್ದರು ಎನ್ನಲಾಗಿದೆ.
ಈ ಖೋಟಾ ನೋಟು ಚಲಾವಣೆ ಜಾಲದಲ್ಲಿ ಇನ್ನೂ ಕೆಲವು ಮಂದಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ