ಹೈದರಾಬಾದ್: ಆಘಾತಕಾರಿ ವಿದ್ಯಮಾನದಲ್ಲಿ, ಬೀಡಿ ಸೇದಿ ಎಸೆದ ಬೆಂಕಿ ಕಡ್ಡಿ ಬೆಂಕಿ ಅವಘಡಕ್ಕೆ ಕಾರಣವಾಗಿ, ಅನೇಕ ವಾಹನಗಳು-ಅಂಗಡಿಗಳು ಬೆಂಕಿಗೆ ಆಹುತಿಯಾದ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ಸಂಭವಿಸಿದೆ. ಸ್ಥಳೀಯರ ಕ್ಷಿಪ್ರ ಕ್ರಮದಿಂದಾಗಿ ಹೆಚ್ಚಿನ ಹಾನಿಯನ್ನು ತಡೆಯಲಾಗಿದೆ.
ಆ ವ್ಯಕ್ತಿ ಬೀಡಿ ಹಚ್ಚಿ ನೆಲಕ್ಕೆ ಬೆಂಕಿಕಡ್ಡಿ ಎಸೆದ ನಂತರ ಬೆಂಕಿ ಹೊತ್ತುಕೊಂಡ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಬುಧವಾರ ಬೆಳಿಗ್ಗೆ 11:30ರ ಸುಮಾರಿಗೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗಂ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ವ್ಯಕ್ತಿಯೊಬ್ಬರು ಇಂಧನ ಕೇಂದ್ರದಿಂದ ಐದು ಲೀಟರ್ ಪೆಟ್ರೋಲ್ ಖರೀದಿಸಿದ್ದರು, ಆದರೆ ಇದೇ ಬೀದಿಯ ಬದಿಯಲ್ಲಿ ಬೈಕ್ ನಿಲ್ಲಿಸಿ ಬೇರೆ ವಸ್ತುಗಳನ್ನೂ ಖರೀದಿಸಿದ್ದರು. ಆದರೆ ಕ್ಯಾನ್‌ನಲ್ಲಿ ತುಂಬಿದ್ದ ಪೆಟ್ರೋಲ್ ರಸ್ತೆಯಲ್ಲಿ ಚೆಲ್ಲಿದೆ. ಪಾರ್ಕ್ ಮಾಡಿದ್ದ ಸ್ಥಳದಲ್ಲೂ ಪೆಟ್ರೋಲ್ ಚೆಲ್ಲಿದೆ. ಅವರು ಹೋಗುವಾಗಲೂ ರಸ್ತೆಯಲ್ಲಿ ಸೋರಿಕೆಯಾಗುತ್ತ ಹೋಗಿದೆ. ಆ ರಸ್ತೆಯಲ್ಲಿ ಹಲವಾರು ಅಂಗಡಿಗಳಿದ್ದವು ಮತ್ತು ಹಲವಾರು ವಾಹನಗಳು ನಿಂತಿದ್ದವು.
ಇದೇ ಪೆಟ್ರೋಲ್ ಚೆಲ್ಲಿದ ರಸ್ತೆಯ ಪಕ್ಕದ ಅಂಗಡಿ ಮುಂದೆ ನಿಂತುಕೊಂಡು ಹರಟೆ ಹೊಡೆಯುತ್ತಿದ್ದ ಇಬ್ಬರು ಇದರ ಅರಿವೇ ಇಲ್ಲದೆ ಬೀಡಿ ಸೇದಲು ಮುಂದಾಗಿದ್ದಾರೆ. ವ್ಯಕ್ತಿಯೊಬ್ಬ ಬೀಡಿ ತೆಗೆದು ಬಾಯಿಗಿಟ್ಟು, ಬೆಂಕಿ ಕಡ್ಡಿ ಗೀರಿ ಬೀಡಿ ಹಚ್ಚಿದ ನಂತರ ಎಂದಿನಂತೆ ಬೆಂಕಿ ಕಡ್ಡಿಯನ್ನು ರಸ್ತೆಗೆ ಎಸೆದಿದ್ದಾನೆ. ತಕ್ಷಣವೇ ಬೆಂಕಿ ಭುಗ್ ಎಂದು ಬೆಂಕಿ ಹೊತ್ತಿಕೊಂಡಿದೆ. ರಸ್ತೆ ಮೇಲೆ ಚೆಲ್ಲಿದ್ದ ಪೆಟ್ರೋಲ್ ಒಂದೇ ಸಮನೆ ಹೊತ್ತಿ ಉರಿಯಲು ಆರಂಭಿಸಿದೆ. ಎತ್ತರದ ಜ್ವಾಲೆಯ ನಡುವೆ ಬೀಡು ಸೇದುತ್ತಿದ್ದವರು ಮತ್ತು ಇತರರು ಸುರಕ್ಷತೆಗಾಗಿ ಓಡಿದ್ದಾರೆ. ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದ್ದವರು ಬೆಂಕಿಯ ಜ್ವಾಲೆಯು ಅವರ ಪೆಟ್ರೋಲ್ ಟ್ಯಾಂಕಿಗೆ ತಗಲುವ ಮೊದಲು ಅವುಗಳನ್ನು ಅಲ್ಲಿಂದ ತೆಗೆಯಲು ಪ್ರಯತ್ನಿಸಿದ್ದಾರೆ. ಬೆಂಕಿಯಿಂದ ಹಲವಾರು ಅಂಗಡಿಗಳು ಮತ್ತು ವಾಹನಗಳು ಹಾನಿಗೊಳಗಾಗಿವೆ.
ಬೆಂಕಿಯ ಜ್ವಾಲೆ ಬೀದಿಗೆ ಆವರಿಸಿದೆ. ಹಲವಾರು ಅಂಗಡಿಗಳು ಸುಟ್ಟು ಹೋಗಿವೆ. ಅಂಗಡಿ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ ಹೊತ್ತಿಕೊಂಡು ಉರಿದಿದೆ. ತಕ್ಷಣವೇ ಸ್ಥಳೀಯರು ಅಂಗಡಿಯಲ್ಲಿಟ್ಟಿದ್ದ ಬೆಂಕಿ ನಂದಿಸುವ ಅಗ್ನಿಶಾಮಕ ಹಾಗೂ ನೀರನ್ನು ತಂದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಘಟನೆಯಲ್ಲಿ ಒಂದು ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಮತ್ತೊಂದು ಅಂಗಡಿ ಭಾಗಶಃ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಎರಡೂ ಅಂಗಡಿಗಳ ಬಾಗಿಲು ಮುಚ್ಚಿತ್ತು. ಇದರ ಜೊತೆಗೆ ಹಲವು ಬೈಕ್ ಹಾಗೂ ಸ್ಕೂಟರ್ ಹೊತ್ತಿ ಉರಿದಿದೆ. ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿದೆ. ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇತ್ತ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ