ನಟ ದರ್ಶನಗೆ ಜೈಲಲ್ಲಿ ರಾಜಾತಿಥ್ಯ..?! ಫೋಟೊ ವೈರಲ್‌

ಬೆಂಗಳೂರು : ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆಯೇ..? ವೈರಲ್ ಆದ ಚಿತ್ರಗಳನ್ನು ನೋಡಿದರೆ ಹಾಗೆ ಅನಿಸದಿರದು…! ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕನ್ನಡ ನಟ ದರ್ಶನ್ ತೂಗುದೀಪ ಜೈಲಿನೊಳಗೆ ವಿಐಪಿ ಆತಿಥ್ಯ ಪಡೆಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿತ್ರದುರ್ಗದ ರೇಣೂಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕನ್ನಡದ ಜನಪ್ರಿಯ ನಟ ದರ್ಶನ್ ತೂಗುದೀಪ ಅವರು ಹಗಲು ಹೊತ್ತಿನಲ್ಲಿ ಇತರ ಮೂವರ ಜೊತೆ ಕುಳಿತು ಹರಟೆ ಹೊಡೆಯುತ್ತ ಪಾನೀಯ ಸೇವಿಸುತ್ತಿರುವ ಚಿತ್ರಗಳು ವೈರಲ್‌ ಆಗಿವೆ. ಆದರೆ ಈಗ ವೈರಲ್ ಆಗಿರುವ ಚಿತ್ರದ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.

ದಿನಾಂಕವಿಲ್ಲದ ವೈರಲ್ ಚಿತ್ರದಲ್ಲಿ ದರ್ಶನ್, ಜೈಲಿನೊಳಗಿನ ಉದ್ಯಾನವನದಲ್ಲಿ ಕುಳಿತು ಪಾನೀಯ ಮತ್ತು ಸಿಗರೇಟ್‌ನೊಂದಿಗೆ ಆನಂದವಾಗಿ ಕಾಲಕಳೆಯುತ್ತಿರುವುದನ್ನು ತೋರಿಸುತ್ತದೆ. ಆತನೊಂದಿಗೆ ಕೆಲವು ರೌಡಿಶೀಟರ್ ಕೈದಿಗಳೂ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ವೈರಲ್‌ ಆಗಿರುವ ಚಿತ್ರದಲ್ಲಿ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್ ತೆರೆದ ಮೈದಾನದಲ್ಲಿ ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ಕುಳಿತಿದ್ದು, ದರ್ಶನ್‌, ಬಲಗೈಯಲ್ಲಿ ಕಪ್‌ ಮತ್ತು ಇನ್ನೊಂದು ಕೈಯಲ್ಲಿ ಸಿಗರೇಟು ಹಿಡಿದಿರುವುದು ಕಂಡುಬರುತ್ತದೆ.
ಬಲಭಾಗದಲ್ಲಿ ರೌಡಿಶೀಟರ್‌ ಎನ್ನಲಾದ ವಿಲ್ಸನ್ ಗಾರ್ಡನ್ ನಾಗ ಮತ್ತು ಇತರ ಕೈದಿಗಳಾದ ನಾಗರಾಜ (ದರ್ಶನ್ ಅವರ ಮ್ಯಾನೇಜರ್ ಮತ್ತು ಸಹ ಆರೋಪಿ) ಮತ್ತು ಕುಳ್ಳ ಸೀನ ಇದ್ದಾರೆ. ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಕಾರಣ, ಈ ಬಗ್ಗೆ ತನಿಖೆ ನಡೆಸುವಂತೆ ಜೈಲು ಅಧಿಕಾರಿಗಳಿಗೆ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

ಈ ಕುರಿತು ಪ್ರತಿಕ್ರಿಯಿಸಿರುವ ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥ ಅವರು, ಸಿಬಿಐ ತನಿಖೆ ನಡೆಸಿ ಇದರ ಹಿಂದಿರುವವರನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ದರ್ಶನ್ ಅವರು ಮನೆಯಲ್ಲಿ ತಯಾರಿಸಿದ ಆಹಾರವನ್ನು ಕೇಳಿದಾಗ ಅದಕ್ಕೆ ಅನುಮತಿ ನೀಡಲಿಲ್ಲ. ನಮಗೆ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಇದು ಹೇಗೆ ಸಂಭವಿಸಿತು ಎಂದು ನನಗೆ ಆಶ್ಚರ್ಯವಾಗಿದೆ. ಇದು ನನಗೆ ಆಘಾತಕಾರಿ ಸುದ್ದಿಯಾಗಿದೆ. ಸರ್ಕಾರವು ಈ ಬಗ್ಗೆ ತನಿಖೆ ನಡೆಸಬೇಕು ಎಂದು ವಿನಂತಿಸುತ್ತೇನೆ ಮತ್ತು ಕ್ರಮ ಕೈಗೊಳ್ಳಿ ಎಂದು ಅವರು ಮನವಿ ಮಾಡಿದರು. ‘ತಪ್ಪು ಮಾಡಿದ್ದೇನೆ ಎಂಬ ಅಪರಾಧಿ ಪ್ರಜ್ಞೆ ಅವರಿಗಿಲ್ಲ’ ಎಂದ ಅವರು, ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿ ಒಟ್ಟು 17 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆಗಸ್ಟ್ 21 ರಂದು ಬೆಂಗಳೂರು ನ್ಯಾಯಾಲಯವು ದರ್ಶನ್, ಪವಿತ್ರಾ ಮತ್ತು ಇತರರ ನ್ಯಾಯಾಂಗ ಬಂಧನವನ್ನು ಆಗಸ್ಟ್ 28 ರವರೆಗೆ ವಿಸ್ತರಿಸಿತು.

ಪ್ರಮುಖ ಸುದ್ದಿ :-   ಭಟ್ಕಳ | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ; ಮಗನಿಗೆ ಗಲ್ಲು ಶಿಕ್ಷೆ, ಅಪ್ಪನಿಗೆ ಜೀವಾವಧಿ ಶಿಕ್ಷೆ ಪ್ರಕಟ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement