
ಕೋಲ್ಕತಾ: ವೈದ್ಯೆಯ ಮೇಲೆ ಅತ್ಯಾಚಾರ-ಕೊಲೆ ನಡೆದ ಕೋಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಭಾನುವಾರ ಬೆಳಿಗ್ಗೆ 15 ಸ್ಥಳಗಳಲ್ಲಿ ಶೋಧ ನಡೆಸಿದೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ತಂಡವು ಘೋಷ್ ಅವರ ಮನೆಗೆ ಬೆಳಿಗ್ಗೆ 6:45 ಕ್ಕೆ ತಲುಪಿತು, ಆದರೆ ಅವರು ಬೆಳಿಗ್ಗೆ 8 ಗಂಟೆಗೆ ವೇಳೆಗೆ ಬಾಗಿಲು ತೆರೆದರು ಎಂದು ವರದಿಯಾಗಿದೆ. ರಾಜ್ಯದ ವಿಧಿವಿಜ್ಞಾನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೇಬಾಶಿಶ್ ಸೋಮ್ ಅವರ ಕೋಲ್ಕತ್ತಾದ ಬೇಲೇಘಾಟಾ ಮನೆಯನ್ನೂ ಸಿಬಿಐ ಶೋಧಿಸಿದೆ.
ಇತರೆ ಸಿಬಿಐ ತಂಡಗಳು ಹೌರಾ ಜಿಲ್ಲೆಯ ಹಟ್‌ಗಚ್ಛಾ ಪ್ರದೇಶದಲ್ಲಿನ ಮಾಜಿ ಆಸ್ಪತ್ರೆ ಸೂಪರಿಂಟೆಂಡೆಂಟ್ ಸಂಜಯ ವಶಿಷ್ಟ ಮತ್ತು ವೈದ್ಯಕೀಯ ಪೂರೈಕೆದಾರ ಬಿಪಾಲ್ ಸಿಂಗ್ ಅವರ ಮನೆಗಳನ್ನೂ ಶೋಧಿಸಿದ್ದಾರೆ ಎಂದು ವರದಿ ತಿಳಿಸಿದೆ.

ಕೋಲ್ಕತ್ತಾ ಆಸ್ಪತ್ರೆಯ ಮಾಜಿ ಪ್ರಾಂಶುಪಾಲರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಗೆ ಕಾರಣವಾದ ವಿಸಲ್ ಬ್ಲೋವರ್ ಅಖ್ತರ್ ಅಲಿ ಅವರ ಹೇಳಿಕೆಯನ್ನು ಸಿಬಿಐ ದಾಖಲಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಅಲಿ ಅವರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು, ನಂತರ ಕೋಲ್ಕತ್ತಾ ಪೊಲೀಸರ ವಿಶೇಷ ತನಿಖಾ ತಂಡವು ಅವರ ಹೇಳಿಕೆಯನ್ನು ದಾಖಲಿಸಿದೆ.
ಅಖ್ತರ್ ಅಲಿ 16 ವರ್ಷಗಳ ಕಾಲ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ. ಅವರು ಸಹಾಯಕ ಸೂಪರಿಂಟೆಂಡೆಂಟ್ ಗ್ರೇಡ್ 2 ಆಗಿ ಪ್ರಾರಂಭಿಸಿದರು, ಗ್ರೇಡ್ 1 ಕ್ಕೆ ಹೋದರು ಮತ್ತು ಉಪ ಅಧೀಕ್ಷಕರಾದರು.
“ಸಂದೀಪ ಘೋಷ್ ಪ್ರಾಂಶುಪಾಲರಾಗಿ ಬರುವ ಮೊದಲು ಇದು ಪೂರ್ವ ಭಾರತದ ನಂಬರ್ ಒನ್ ಕಾಲೇಜು. ಇದು 100 ವರ್ಷಗಳ ಹಿಂದಿನ ಕಾಲೇಜು. ನಾನು ಸಾಕಷ್ಟು ಹಗರಣಗಳನ್ನು ಬಹಿರಂಗಪಡಿಸಿದ್ದೇನೆ. ವಿದ್ಯಾರ್ಥಿಗಳನ್ನು ಫೇಲ್ ಮಾಡುವುದೇ ಮೊದಲ ಹಗರಣ. ಸಂದೀಪ ಘೋಷ್ ಅವರಿಂದ ಹಣ ವಸೂಲಿ ಮಾಡುತ್ತಿದ್ದರು. ಮತ್ತು ಕೆಲವು ವಿದ್ಯಾರ್ಥಿಗಳು ಈ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಅಖ್ತರ್ ಅಲಿ ಆರೋಪಿಸಿದ್ದಾರೆ.
“ಸಂದೀಪ್ ಘೋಷ್ ವರ್ಗಾವಣೆ ವಿಚಾರ ಬಂದಾಗಲೆಲ್ಲ ಕಿರಿಯ ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಅಕ್ರಮವಾಗಿ ಮೃತದೇಹಗಳ ಕಳ್ಳಸಾಗಣೆ, ಬಯೋಮೆಡಿಕಲ್ ತ್ಯಾಜ್ಯ ಹಗರಣ ಸೇರಿದೆ. ವಿಜಿಲೆನ್ಸ್ ಸೇರಿದಂತೆ ಉನ್ನತ ಮಟ್ಟಕ್ಕೆ ದೂರುಗಳು ಹೋದವು, ಆದರೆ ಏನೂ ಆಗಿಲ್ಲ” ಎಂದು ಅಖ್ತರ್ ಅಲಿ ಹೇಳಿದ್ದಾರೆ.
ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಶಂಕಿತನನ್ನು ನಾಗರಿಕ ಸ್ವಯಂಸೇವಕ ಸಂಜಯ ರಾಯ್ ಎಂದು ಗುರುತಿಸಲಾಗಿದೆ, ಆತ ಅಪರಾಧ ನಡೆದ ಸ್ಥಳದ ಬಳಿಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಕಂಡುಬಂದಿದ್ದಾನೆ. ಆರೋಪಿ ಸಂಜಯ ರಾಯ್ ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೆ, ಮಾಜಿ ಪ್ರಾಂಶುಪಾಲರಾದ ಸಂದೀಪ ಘೋಷ್ ಮತ್ತು ವೈದ್ಯೆಯ ಕೊಲೆಯಾದ ರಾತ್ರಿ ಕರ್ತವ್ಯದಲ್ಲಿದ್ದ ಇಬ್ಬರು ವೈದ್ಯರು, ಒಬ್ಬ ಇಂಟರ್ನ್ ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನೂ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ.
ಸಂಜಯ್ ರಾಯ್ ಮುಂಜಾನೆ 1:03 ಗಂಟೆಗೆ ಆಸ್ಪತ್ರೆಗೆ ಪ್ರವೇಶಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ. ವಿಚಾರಣೆ ವೇಳೆ ಪೊಲೀಸರು ಆತನಿಗೆ ಸಿಸಿಟಿವಿ ಸಾಕ್ಷ್ಯವನ್ನು ತೋರಿಸಿದ್ದು, ನಂತರ ಸಂಜಯ ರಾಯ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದ ರಾತ್ರಿ 1.03 ಗಂಟೆಗೆ ಆಸ್ಪತ್ರೆ ತಲುಪುವ ಮುನ್ನ ಸಂಜಯ ರಾಯ್ ಕೋಲ್ಕತ್ತಾದ ಎರಡು ವೇಶ್ಯಾಗೃಹಗಳಿಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಆಗಸ್ಟ್ 8 ರಂದು ರಾತ್ರಿ ರೆಡ್ ಲೈಟ್ ಏರಿಯಾ ಸೋನಾಗಚಿಗೆ ಹೋಗಿ ಮದ್ಯ ಸೇವಿಸಿ ಎರಡು ವೇಶ್ಯಾಗೃಹಗಳಿಗೆ ಒಂದರ ನಂತರ ಒಂದರಂತೆ ಭೇಟಿ ನೀಡಿದ್ದ ಎಂದು ಮೂಲಗಳು ತಿಳಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ